Site icon Ullalavani

ಪ್ರವಾಹದ ನೀರಿಗೆ ಕೊಚ್ಚಿಹೋದ ವ್ಯಕ್ತಿ-ಬಂಟ್ವಾಳದಲ್ಲಿ ಎನ್‌ಡಿಆರ್‌ಎಫ್ ಶೋಧ ಕಾರ್ಯಾಚರಣೆ

ಬಂಟ್ವಾಳ, ಆ. 3: ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಯತ್ನಿಸಿದ ವ್ಯಕ್ತಿಯೊಬ್ಬರು ನೀರಿನ ಪ್ರವಾಹಕ್ಕೆ ಕೊಚ್ಚಿಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ–ವರಂಗಲ ಸಮೀಪ ಸೋಮವಾರ ನಡೆದಿದೆ.

ಕೊಚ್ಚಿಹೋದ ವ್ಯಕ್ತಿಯನ್ನು ಜೀವನ್ ಪಿಂಟೋ (42) ಎಂದು ಅನುಮಾನಿಸಲಾಗಿದೆ. ಹಳ್ಳದಲ್ಲಿ ನೀರಿನ ಹರಿವು ತೀವ್ರವಾಗಿದ್ದರೂ ದಾಟಲು ಮುಂದಾದ ವೇಳೆ ಕಾಲು ಜಾರಿ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ಆರಂಭಿಸಿದರು. ಡೆಪ್ಯುಟಿ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೌಬೆ ಹಾಗೂ ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಾಟಿ ಅವರ ನೇತೃತ್ವದ 22 ಸದಸ್ಯರ ಎನ್‌ಡಿಆರ್‌ಎಫ್ ತಂಡ ನಾಪತ್ತೆಯಾದ ವ್ಯಕ್ತಿಗಾಗಿ ನಿರಂತರ ಶೋಧ ಕಾರ್ಯ ನಡೆಸುತ್ತಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಳ್ಳ-ತೊರೆಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ನೀರಿನ ಪ್ರದೇಶಗಳಿಗೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Exit mobile version