ಉಳ್ಳಾಲ: ಭರತನಾಟ್ಯ ಕ್ಷೇತ್ರಕ್ಕೆ ಶ್ರಾವಣ್ ಉಳ್ಳಾಲ್ ಅವರ ಕೊಡುಗೆ ಅಪಾರ ಎಂದು ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾನಕೀ ಪುತ್ರನ್ ಹೇಳಿದರು.
ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲವು ಇತ್ತೀಚೆಗೆ ನಿಧನರಾದ ಭರತನಾಟ್ಯ ಗುರು ವಿದ್ವಾನ್ ಶ್ರಾವಣ್ ಉಳ್ಳಾಲರ ನೆನಪಿನಲ್ಲಿ ಉಳ್ಳಾಲ ಭಗವತೀ ಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಿದ “ಶ್ರಾವಣ ಸ್ಮರಣ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಾವಣ್ ಉಳ್ಳಾಲರು ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ, ಸಣ್ಣ ಪ್ರಾಯದಲ್ಲೇ ನಮ್ಮನ್ನಗಲಿರುವುದು ಭರತನಾಟ್ಯ ಕ್ಷೇತ್ರಕ್ಕೆ ಅತೀ ದೊಡ್ಡ ನಷ್ಟ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ಭಟ್ನಗರ ವಹಿಸಿದ್ದರು. ಶ್ರೀಮತಿ ಬಬಿತಾ ಸೂರಜ್, ಕುಸುಮಾಕರ್ ಕುಂಪಲ, ಗುರುಕುಲದ ಗೌರವಾಧ್ಯಕ್ಷರು ಶ್ರೀಮತಿ ಶಕೀಲಾ ಜನಾರ್ಧನ್, ಟ್ರಸ್ಟಿಗಳಾದ ಶೈನಾ ಶ್ರಾವಣ್, ಬಬಿತಾ ಕಿರಣ್ ಭಾಗವಹಿಸಿದ್ದರು.
ವಿದುಷಿ ಹರ್ಷಿತಾ ಸಾಲ್ಯಾನ್ ರಿಂದ ಏಕವ್ಯಕ್ತಿ ಹಾಗೂ ಪ್ರಕಾಮ್ಯ ತಂಡದಿಂದ ಸಮೂಹ ನೃತ್ಯ ಕಾರ್ಯಕ್ರಮ ನೆರವೇರಿತು. ಕಾರ್ಯದರ್ಶಿ ಕಿರಣ್ ಉಳ್ಳಾಲ್ ಸ್ವಾಗತಿಸಿ, ವಂದಿಸಿದರು.
