Site icon Ullalavani

ಸ್ವಚ್ಛ ಗ್ರಾಮ, ಸುರಕ್ಷಿತ ಪರಿಸರದತ್ತ ಹೆಜ್ಜೆ: ಬಾಳೆಪುಣಿ ಗ್ರಾಮ ಪಂಚಾಯತ್ ಮುಡಿಪು ಅರಫಾ ಎಂಟರ್‌ಪ್ರೈಸಸ್‌ಗೆ ರೂ.10,000 ದಂಡನಾ ನೋಟಿಸ್

ಉಳ್ಳಾಲ, ಜುಲೈ 30: ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಬಾಳೆಪುಣಿ ಗ್ರಾಮ ಪಂಚಾಯತ್ ಕಾನೂನುಬದ್ಧ ಕ್ರಮಕ್ಕೆ ಮುಂದಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈರಂಗಳ ಗ್ರಾಮದ ಮುಕ್ಕಚಿ ಮುಖಿ ರಸ್ತೆಯಲ್ಲಿರುವ ಮುಡಿಪು ಅರಫಾ ಎಂಟರ್‌ಪ್ರೈಸಸ್‌ಗೆ ಸಂಸ್ಥೆಗೆ ಪಂಚಾಯತ್ ವತಿಯಿಂದ ರೂ.10,000 ದಂಡನಾ ನೋಟಿಸ್ ಜಾರಿಗೊಳಿಸಲಾಗಿದೆ.

ಪಂಚಾಯತ್‌ಗೆ ಬಂದ ಸಾರ್ವಜನಿಕ ದೂರುಗಳ ಪ್ರಕಾರ, ಸಂಸ್ಥೆಯ ಸಿಬ್ಬಂದಿ ರಸ್ತೆ ಬದಿ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ಹಲವು ದಿನಗಳಿಂದ ಸುಟ್ಟು ಪರಿಸರ ಮಾಲಿನ್ಯ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದಲ್ಲದೆ, ಪರಿಸರ ಮತ್ತು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ (ಶಾಸನ ತಿದ್ದುಪಡಿ ನಿಯಮಾವಳಿ) ಅಧಿಸೂಚನೆ-2020ರ ಪ್ರಕಾರ, ಬಯಲು ಪ್ರದೇಶ ಅಥವಾ ರಸ್ತೆ ಬದಿಯಲ್ಲಿ ಕಸ ಎಸೆಯುವುದು ಹಾಗೂ ಸುಡುವುದು ದಂಡನೀಯ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ರೂ.10,000 ದಂಡ ವಿಧಿಸಿ, ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ದಂಡ ಪಾವತಿಸುವಂತೆ ಸೂಚಿಸಿದೆ. ತಪ್ಪಿದಲ್ಲಿ ಯಾವುದೇ ಹೆಚ್ಚುವರಿ ಸೂಚನೆ ನೀಡದೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಘಟನೆ ಕೇವಲ ಒಂದು ಸಂಸ್ಥೆಗೆ ನೀಡಿದ ನೋಟೀಸ್ ಮಾತ್ರವಲ್ಲ; ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆಯಾಗಿದೆ. ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವನ್ನು ಬಯಲಿನಲ್ಲಿ ಸುಡುವುದರಿಂದ ವಿಷಕಾರಿ ಹೊಗೆ ವಾತಾವರಣಕ್ಕೆ ಸೇರಿ ಮಕ್ಕಳ, ವೃದ್ಧರ ಹಾಗೂ ಉಸಿರಾಟದ ಸಮಸ್ಯೆ ಇರುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೊತೆಗೆ ಮಣ್ಣು, ಗಾಳಿ ಮತ್ತು ಪರಿಸರದ ಗುಣಮಟ್ಟವೂ ಹದಗೆಡುತ್ತದೆ.

ಗ್ರಾಮ ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳು ಇಂತಹ ಉಲ್ಲಂಘನೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿವೆ. ಪರಿಸರ ಸಂರಕ್ಷಣೆ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ.

ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಬಯಲಿನಲ್ಲಿ ಅಥವಾ ರಸ್ತೆ ಬದಿಯಲ್ಲಿ ಸುಡಬೇಡಿ. ಸ್ಥಳೀಯ ಸಂಸ್ಥೆಗಳು ಸೂಚಿಸಿರುವ ತ್ಯಾಜ್ಯ ನಿರ್ವಹಣಾ ವಿಧಾನಗಳನ್ನು ಅನುಸರಿಸಿ, ಸ್ವಚ್ಛ ಹಾಗೂ ಆರೋಗ್ಯಕರ ಗ್ರಾಮ ನಿರ್ಮಾಣಕ್ಕೆ ಸಹಕರಿಸಿ ಎಂದು ಪಂಚಾಯತ್ ಸಾರ್ವಜನಿಕರಿಗೆ ಮನವಿ ಮಾಡಿದೆ.

Exit mobile version