ಮಂಗಳೂರು; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ, ಮಾಸ್ಟರ್ ಅತೀಶ್ ಎಸ್ ಶೆಟ್ಟಿ, ಡಾ. ಪ್ರದೀಪ್ ಕೆಂಚನೂರು, ಶಿವಧ್ವಜ ಶೆಟ್ಟಿ, ನಿರ್ಮಾಪಕ ಪ್ರಶಾಂತ್ ರೈಯವರನ್ನು ರೋಹನ್ ಕಾರ್ಪೊರೇಷನ್‌ನ ನಿರ್ದೇಶಕ ಡಿಯೋನ್ ಮೊಂತೆರೊ ಅವರ ಅಧ್ಯಕ್ಷತೆಯಲ್ಲಿ ಬಿಜೈಯ ರೋಹನ್ ಸಿಟಿಯಲ್ಲಿ ಅಭಿನಂದಿಸಿ ಗೌರವಿಸಿದ್ದಾರೆ.
ಗೌರವ ಸ್ವೀಕರಿಸಿ ಮಾತನಾಡಿದ ‘ಮಿಥ್ಯಾ’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ರೂಪಶ್ರೀ ವರ್ಕಾಡಿ ಅವರು ಸಂತಸವನ್ನು ವ್ಯಕ್ತಪಡಿಸಿದ್ರು.
ಬಳಿಕ `ಮಿಥ್ಯಾ’ ಚಿತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಪಡೆದ ಮಾಸ್ಟರ್ ಅತೀಶ್ ಎಸ್. ಶೆಟ್ಟಿ: ಚಲನಚಿತ್ರ ಕುರಿತ ಅತ್ಯುತ್ತಮ ಪುಸ್ತಕಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ. ಪ್ರದೀಪ್ ಕೆಂಚನೂರು; ಹಾಗೂ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ತುಳು ಚಿತ್ರವೆಂದು ಗುರುತಿಸ ಲ್ಪಟ್ಟ ‘ಇಂಬು’ ಚಿತ್ರದ ನಿರ್ದೇಶಕ ಶಿವಧ್ವಜ ಶೆಟ್ಟಿ ಮತ್ತು ನಿರ್ಮಾಪಕ ಪ್ರಶಾಂತ್ ರೈ ಅವರು ಮಾತನಾಡಿ, ರೋಹನ್ ಕಾರ್ಪೋರೇಷನ್‌ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರೋಹನ್ ಕಾರ್ಪೊರೇಷನ್‌ನ ನಿರ್ದೇಶಕರಾದ ಡಿಯೋನ್ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಸ್ತಿ ವಿಜೇತರ ಅಸಾಧಾರಣ ಸಾಧನೆಗಳಿಗಾಗಿ ಅವರನ್ನು ಅಭಿನಂದಿಸಿದರು. ಮತ್ತು ಅವರ ಸಾಧನೆಗಳು ಈ ಪ್ರದೇಶಕ್ಕೆ ಅಪಾರ ಹೆಮ್ಮೆಯನ್ನು ತಂದಿವೆ ಎಂದು ಹೇಳಿದರು. ಇಂತಹ ಸಾಧನೆಗಳನ್ನು ಗುರುತಿಸುವುದು ರೋಹನ್ ಕಾರ್ಪೊರೇಷ ನ್‌ಗೆ ಹೆಮ್ಮೆಯ ವಿಷಯ ಮತ್ತು ಅವರ ಯಶಸ್ಸು ಈ ಪ್ರದೇಶದ ಇನ್ನೂ ಅನೇಕ ಉದಯೋನ್ಮುಖ ಕಲಾವಿದರು, ಚಲನಚಿತ್ರ ನಿರ್ಮಾಪಕರು ಮತ್ತು ಕಥೆಗಾರರಿಗೆ ಸ್ಫೂರ್ತಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ಸಮಾರಂಭದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು, ಕಂಪನಿಯ ಉದ್ಯೋಗಿಗಳು, ರೋಹನ್ ಕಾರ್ಪೊರೇಷನ್‌ನ ಜನರಲ್ ಮ್ಯಾನೇಜರ್ ಸುಮನಾ, ಲವಿತಾ ಡಿಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.