Site icon Ullalavani

ಸಚಿವ ಯು.ಟಿ.ಖಾದರ್‌ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್‌ಶಿಪ್ ಪ್ರಶಸ್ತಿ ಪ್ರದಾನ

ಬೆಂಗಳೂರು, ಜು.27: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಮೆರಿಕದ ಇಲಿನಾಯ್ಸ್ ರಾಜ್ಯದ ನೇಪರ್ವಿಲ್ಲೆಯ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ಅಮೆರಿಕನ್ ಮಲ್ಟಿ ಎಥಿಕ್ ಕಮಿಷನ್ (AMEC)ಯ 15ನೇ ವಾರ್ಷಿಕ ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಗ್ಲೋಬಲ್ ಸಿಟಿಝನ್ ಲೀಡರ್‌ಶಿಪ್ ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್ ಈ ಪ್ರಶಸ್ತಿಯು ನನಗೆ ಅತ್ಯಂತ ಸಂತೋಷ ಹಾಗೂ ಗೌರವದ ಸಂಗತಿಯಾಗಿದೆ. ಈ ಮಾನ್ಯತೆ, ಗೌರವವು ನನ್ನ ಮೇಲಿನ ವಿಶ್ವಾಸ ಮತ್ತು ಜನಸೇವೆಯ ದಾರಿಯಲ್ಲಿ ಕೈಗೊಂಡ ಪ್ರಯತ್ನಗಳಿಗೆ ದೊರೆತ ಪ್ರೋತ್ಸಾಹವಾಗಿದೆ. ಈ ಗೌರವವನ್ನು ತಾನು ಕರ್ನಾಟಕ ರಾಜ್ಯದ ಜನತೆಗೆ ಸಮರ್ಪಿಸುವೆ ಎಂದಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ಹಲವು ದಶಕಗಳಿಂದ ಸಲ್ಲಿಸಿರುವ ಸೇವೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ನಾಯಕತ್ವ ಸಮಗ್ರ ಆಡಳಿತ ಹಾಗೂ ಸಮುದಾಯ-ಕೇಂದ್ರಿತ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಯು.ಟಿ. ಖಾದರ್‌ರನ್ನು AMEC ಗ್ಲೋಬಲ್ ಸಿಟಿಝನ್ ಲೀಡರ್‌ಶಿಪ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಈ ಸಂದರ್ಭ AMEC ಸಂಸ್ಥಾಪಕ ಅಧ್ಯಕ್ಷ ಹಾಗೂ ಜಾಗತಿಕ ಕಾರ್ಯತಂತ್ರದ ಒಕ್ಕೂಟದ ಅಧ್ಯಕ್ಷ ಡಾ.ವಿಜಯ್ ಜಿ. ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.
ಅಮೇರಿಕಾ ಪ್ರವಾಸದಲ್ಲಿರುವ ಸಚಿವ ಖಾದರ್ ಜು.27ರಂದು ಇಂಡಿಯಾನಾದ ವೆಸ್ಟ್ ಲಫಯೆಟ್ಟೆಯ ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಆರೋಗ್ಯಕರ ಮಕ್ಕಳು, ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಭವಿಷ್ಯ’ ವಿಷಯದ ಜಾಗತಿಕ ಕಾರ್ಯತಂತ್ರದ ಒಕ್ಕೂಟ (ಜಿಎಸ್‌ಎ) ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ವಾಷಿಂಗ್ಟನ್ ಡಿಸಿಗೆ ತೆರಳಿ ರಾಷ್ಟ್ರೀಯ ನಾಯಕರು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದು ಜು.30ರಂದು ಬೆಂಗಳೂರಿಗೆ ಮರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Exit mobile version