
ಉಳ್ಳಾಲ: ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಕೆಪಿಎಲ್) ಚೊಚ್ಚಲ ಆವೃತ್ತಿಯ ಆಟಗಾರರ ಹರಾಜಿನಲ್ಲಿ ತೊಕ್ಕೊಟ್ಟು ಕಾಪಿಕಾಡು ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಪ್ರತಿಭೆ, ಗೋಪಿನಾಥ್ ಕಾಪಿಕಾಡ್ ಅವರ ಪುತ್ರ ಸಾಯಿ ಪ್ರಸಾದ್ ಗರಿಷ್ಠ ಮೊತ್ತಕ್ಕೆ ಬಿಕರಿಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕಾಪಿಕಾಡಿನ ಗರಡಿಯಲ್ಲಿ ಪಳಗಿದ ಸಾಯಿ ಪ್ರಸಾದ್ ಅವರನ್ನು ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ ₹3.60 ಲಕ್ಷಕ್ಕೆ ಖರೀದಿಸಿದ್ದು, ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ಆಟಗಾರನೊಬ್ಬ ಪಡೆದ ಅತ್ಯಧಿಕ ಮೊತ್ತ ಎಂಬ ದಾಖಲೆಯೂ ಅವರ ಹೆಸರಿಗೆ ಸೇರಿದೆ.
ನಗರದ ಕೋರಮಂಗಲ ಕ್ಲಬ್‌ನಲ್ಲಿ ನಡೆದ ಹರಾಜಿನಲ್ಲಿ ಎಂಟು ಫ್ರಾಂಚೈಸಿಗಳು ಭಾಗವಹಿಸಿದ್ದವು. ಸಾಯಿ ಪ್ರಸಾದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಹುತೇಕ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಿದರೂ, ಅಂತಿಮವಾಗಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡವೇ ಗರಿಷ್ಠ ಮೊತ್ತ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.
ಇದೇ ಹರಾಜಿನಲ್ಲಿ ಗಗನ್ ಗೌಡ ₹3.20 ಲಕ್ಷಕ್ಕೆ ಹೊಯ್ಸಳ ಎಂಪೈರ್ ತಂಡಕ್ಕೆ ಬಿಕರಿಯಾಗುವ ಮೂಲಕ ಎರಡನೇ ಅತಿ ಹೆಚ್ಚು ಮೊತ್ತ ಪಡೆದ ಆಟಗಾರರಾದರು. ಸುಶೀಲ್ ಕಾಂಬ್ರೇಕರ್ (₹2.90 ಲಕ್ಷ), ವಿಶ್ವಾಸ್ ಎಸ್. (₹2.60 ಲಕ್ಷ), ವಿನೋದ್ ನಾಯಕ್ (₹2.20 ಲಕ್ಷ) ಸೇರಿದಂತೆ ಹಲವು ಆಟಗಾರರು ಉತ್ತಮ ಮೊತ್ತಕ್ಕೆ ವಿವಿಧ ಫ್ರಾಂಚೈಸಿಗಳ ಪಾಲಾದರು. ಐಪಿಎಲ್ ಹಾಗೂ ಪ್ರೊ ಕಬಡ್ಡಿ ಲೀಗ್ ಮಾದರಿಯಲ್ಲಿ ನಡೆದ ಈ ಹರಾಜಿನಲ್ಲಿ ಪ್ರತಿ ಫ್ರಾಂಚೈಸಿಗೆ ₹10 ಲಕ್ಷ ಮಿತಿ ನಿಗದಿಪಡಿಸಲಾಗಿದ್ದು, ಗರಿಷ್ಠ 14 ಆಟಗಾರರನ್ನು ಖರೀದಿಸಿ ತಂಡಗಳನ್ನು ಕಟ್ಟಿಕೊಳ್ಳಲಾಯಿತು. ಗ್ರಾಮೀಣ ಭಾಗದ ಪ್ರತಿಭಾವಂತ ಕಬಡ್ಡಿ ಆಟಗಾರರಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ 5ಓ Sಠಿoಡಿಣs Pvಣ. ಐಣಜ. ಸಹಯೋಗದಲ್ಲಿ ಈ ಲೀಗ್ ಆಯೋಜಿಸಲಾಗುತ್ತಿದೆ.