ಮಲಪ್ಪುರಂ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅ ಶೈಖುನಾ ಪ್ರೊ.ಕೆ.ಅಲಿಕುಟ್ಟಿ ಮುಸ್ಲಿಯಾರ್ (81) ಪೆರಿಂದಲ್ಮಣ್ಣ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರ ನಿಧನದ ಹಿನ್ನೆಲೆಯಲ್ಲಿ, ನಾಳೆ (24/07/2026) ಶುಕ್ರವಾರ ಸಮಸ್ತದ ಎಲ್ಲಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಆದ್ದರಿಂದ ನಮ್ಮ ಮದ್ರಸಕ್ಕೂ ನಾಳೆ ರಜೆಯಾಗಿರುತ್ತದೆ.
1945ರಲ್ಲಿ ಮಲಪ್ಪುರಂ ಜಿಲ್ಲೆಯ ಇರುಂಬುಝಿ ತೆಕ್ಕುಮ್ಮುರ್ರಿಯ ತಿರುಕ್ಕಾಡ್ ನ ಕುನ್ನತ್ ಮೂಸಾ ಹಾಜಿ ಮತ್ತು ಮಡಂಬಿ ಇಯ್ಯತುಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ಪ್ರೊ.ಅಲಿಕುಟ್ಟಿ ಮುಸ್ಲಿಯಾರ್, ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಅವರ ನಿಧನದ ನಂತರ 2016ರಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 2013ರಿಂದ ಕಾಸರಗೋಡು ಜಿಲ್ಲಾ ಖಾಝಿಯಾಗಿದ್ದ ಅವರು, 2003ರಿಂದ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. 16 ನೇ ವಯಸ್ಸಿನಲ್ಲಿ ತಿರುರ್ ಕಾಡ್ ಮಹಲ್ ಮಸೀದಿಯ ಖತೀಬರಾಗಿ ಮತ್ತು 20ನೇ ವಯಸ್ಸಿನಲ್ಲಿ ಮಹಲ್ ಖಾಝಿಯಾಗಿ ನೇಮಕಗೊಂಡ ಅಲಿಕುಟ್ಟಿ ಮುಸ್ಲಿಯಾರ್, ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಿದ ವ್ಯಕ್ತಿತ್ವವಾಗಿದ್ದರು. 1968ರಲ್ಲಿ ಪಟ್ಟಿಕ್ಕಾಡ್ನ ಜಾಮಿಯಾ ನೂರಿಯಾ ಅರಬಿಕ್ ಕಾಲೇಜಿನಿಂದ ಫೈಝಿ ಪದವಿ ಪಡೆದ ನಂತರ, ಅವರು ಮೊದಲು ಮೀನಾರ್ಕುಳಿ ದರ್ಸ್ ನಲ್ಲಿ ಸೇವೆ ಸಲ್ಲಿಸಿದರು. 1978ರಲ್ಲಿ ಅವರು ಚೆಮ್ಮಂಕಡವು ದರ್ಸ್ ಗೆ ಸ್ಥಳಾಂತರಗೊಂಡರು. 1979ರಲ್ಲಿ ಪಟ್ಟಿಕ್ಕಾಡ್ನ ಜಾಮಿಯಾ ನೂರಿಯಾದಲ್ಲಿ ಶಂಸುಲ್ ಉಲಮಾ ಹುದ್ದೆಯಿಂದ ತೆರವಾದ ಸ್ಥಾನಕ್ಕೆ ಅಧ್ಯಾಪಕರಾಗಿ ನೇಮಕಗೊಂಡು ಅವರು, 2003ರಿಂದ ಅಲ್ಲಿ ಪ್ರಾಂಶುಪಾಲರಾಗಿ ಹುದ್ದೆ ವಹಿಸಿಕೊಂಡಿದ್ದರು. 1976ರಲ್ಲಿ ಸಮಸ್ತ ಮಲಪ್ಪುರಂ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಕೆ.ಅಲಿಕುಟ್ಟಿ ಮುಸ್ಲಿಯಾರ್, 1978ರಿಂದ ಜಾಮಿಯಾ ಹಳೆಯ ವಿದ್ಯಾರ್ಥಿಗಳ ಸಂಘಟನೆ ‘ಓಸ್ಫೋಝಾನಾ’ದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1986ರಲ್ಲಿ ಸಮಸ್ತ ಮುಶಾವರದ ಸದಸ್ಯರಾಗಿ ಮತ್ತು 1992 ರಲ್ಲಿ ಎಸ್ವೈಎಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 2010ರಲ್ಲಿ ಅವರು ಸಮಸ್ತ ಜಂಟಿ ಕಾರ್ಯದರ್ಶಿಯಾದರು. 2009ರಿಂದ ಅವರು ಸಮಸ್ತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಭಾರತದ ಒಳಗೆ ಮತ್ತು ಹೊರಗೆ ಅನೇಕ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಿರುವ ಮತ್ತು ಭಾರತೀಯ ಮುಸ್ಲಿಮರ ಪರವಾಗಿ ಅನೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಅಲಿಕುಟ್ಟಿ ಮುಸ್ಲಿಯಾರ್, ಪ್ರಸಕ್ತ ಮುಸ್ಲಿಮ್ ವರ್ಲ್ಡ್ ಲೀಗ್ ನ ಇಸ್ಲಾಮಿಕ್ ಫಿಖ್ಹ್ ಕೌನ್ಸಿಲ್ ನ ಸದಸ್ಯರಾಗಿದ್ದರು. 1978ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ ಹೈದರಾಬಾದ್ ನಲ್ಲಿ ಇಂಗ್ಲಿಷ್ ಆಂಡ್ ಫಾರಿನ್ ಲಾಂಗ್ವೇಜ್ ಯುನಿವರ್ಸಿಸಿಯ ಪಠ್ಯಪದ್ಧತಿ ರಚನಾ ಸಮಿತಿಯ ಸದಸ್ಯರಾಗಿದ್ದರು. ಈಜಿಪ್ಟ್ ನ ಅಲ್-ಅಝರ್ ವಿಶ್ವವಿದ್ಯಾನಿಲಯದಲ್ಲಿ ಶಿಹಾಬ್ ತಂಙಳ್ ಅವರ ಬದಲಿಯಾಗಿ ‘ಅಝರ್’ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಭಾಗವಹಿಸಿದ್ದರು. 2011ರಲ್ಲಿ ಅಧ್ಯಕ್ಷ ಮುಅಮ್ಮರ್ ಗಡಾಫಿ ನೇತೃತ್ವದಲ್ಲಿ ಲಿಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸೂಫಿ ಸಮ್ಮೇಳನ, 2012ರಲ್ಲಿ ಮೊರಾಕ್ಕೊದಲ್ಲಿ ನಡೆದ ಸೂಫಿ ಸಮ್ಮೇಳನ ಮತ್ತು ನಂತರದ ಎರಡು ವರ್ಷಗಳಲ್ಲಿ ಆಫ್ರಿಕನ್ ದೇಶವಾದ ಸೆನೆಗಲ್ ನಲ್ಲಿ ನಡೆದ ಸಮ್ಮೇಳನಗಳಲ್ಲಿ ಅವರು ಸೂಫಿಸಂ ಕುರಿತು ಪ್ರಬಂಧಗಳನ್ನು ಮಂಡಿಸಿದ್ದರು. ಅವರು 2014ರಿಂದ ಸುಪ್ರಭಾತಂ ಪತ್ರಿಕೆಯ ಅಧ್ಯಕ್ಷರಾಗಿದ್ದರು. 2003ರಿಂದ 2006ರವರೆಗೆ ಕೇರಳ ಹಜ್ ಸಮಿತಿಯ ಅಧ್ಯಕ್ಷರಾಗಿ ಮತ್ತು 2006ರಿಂದ 2009ರವರೆಗೆ ಭಾರತ ಹಜ್ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲಿಕುಟ್ಟಿ ಮುಸ್ಲಿಯಾರ್ ಹಜ್ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಸಚಿವರಲ್ಲದ ವ್ಯಕ್ತಿ ಎಂಬುದು ವಿಶೇಷ. 1992 ರಿಂದ 2016 ರವರೆಗೆ ಅವರು SYS ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2004ರಿಂದ ಅವರು ರಾಜ್ಯ ಮುಸ್ಲಿಮ್ ಅನಾಥಾಶ್ರಮ ಸಮನ್ವಯ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಅಲ್ ಮುಅಲ್ಲಿಮ್, ಅಲ್ ನೂರ್ ನಿಯತಕಾಲಿಕೆಗಳು ಮತ್ತು ಸುನ್ನಿ ಅಫ್ಕರ್ನ ಮುಖ್ಯ ಸಂಪಾದಕರಾಗಿದ್ದರು.
