ಕೊಲಂಬೊ,ಜು. 23 : ಶ್ರೀಲಂಕಾ ಜಲಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಅವರ ಟ್ರಾಲರ್ ದೋಣಿಯನ್ನೂ ವಶಕ್ಕೆ ಪಡೆದುಕೊಂಡಿದೆ.
ಮೀನುಗಾರರು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ದಾಟಿ ತಲೈಮನ್ನಾರ್ ಉತ್ತರ ಭಾಗದ ಶ್ರೀಲಂಕಾ ಜಲಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಈ ವೇಳೆ ಬುಧವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಮಾಹಿತಿ ನೀಡಿದೆ.ಕಾರ್ಯಾಚರಣೆ ವೇಳೆ 50ಕ್ಕೂ ಹೆಚ್ಚು ಭಾರತೀಯ ಟ್ರಾಲರ್‌ಗಳು ಇರಾನತಿವು ದಕ್ಷಿಣ ಭಾಗದ ಶ್ರೀಲಂಕಾ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಬಂಧಿತ 9 ಮೀನುಗಾರರು ಹಾಗೂ ವಶಪಡಿಸಿಕೊಂಡ ಟ್ರಾಲರ್‌ನ್ನು ಮನ್ನಾರ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.