ಸುಳ್ಯ: ಕೌಟುಂಬಿಕ ಕಿರುಕುಳ ಹಾಗೂ ಮನಸ್ತಾಪದ ಆರೋಪ ಹಿನ್ನೆಲೆಯಲ್ಲಿ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದಲ್ಲಿ ಕೊಲೆ ಮಾಡಿರುವ ದೂರಿನ ಮೇರೆಗೆ, ಆಕೆಯ ಮಾವ, ಅತ್ತೆ ಹಾಗೂ ನಾದಿನಿ ಸೇರಿ ಮೂವರು ಆರೋಪಿಗಳನ್ನು ಸುಳ್ಯ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ (43) ಎಂಬುವರ ಮಗಳು ಫಾತಿಮತ್ ನಿಶಾನ ಮೃತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಮಾವ ಸಿ.ಪಿ. ಅಲವಿ (54), ಅತ್ತೆ ಅಯಿಷಾ ಸಿ.ಎ. ಹಾಗೂ ನಾದಿನಿ ಫಸಿಲಾ ಸಿ.ಎ. (29) ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ನಾಲ್ಕು ವರ್ಷಗಳ ಹಿಂದೆ ಫಾತಿಮತ್ ನಿಶಾನ ಅವರ ವಿವಾಹ ನೆರವೇರಿತ್ತು. ಜುಲೈ 18, 2026ರಂದು ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಫೋನ್ ಮಾಡಿ ಮಾತನಾಡುವಾಗ, ಗಂಡನ ಮನೆಯಲ್ಲಿ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ತನಗೆ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದರು. ತಾಯಿ-ಮಗಳ ಸಂಭಾಷಣೆ ನಡೆಯುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಮಾವ ಅಲವಿ, ನಿಶಾನ ಅವರ ಕೈಯಿಂದ ಫೋನ್ ಕಸಿದುಕೊಂಡು, “ನಿನ್ನ ಮಗಳನ್ನು ಕೊಲ್ಲುತ್ತೇನೆ” ಎಂದು ತಾಯಿ ಜುಬೈದ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಫೋನ್ ಕರೆ ಬೆನ್ನಲ್ಲೇ ಆತಂಕಗೊಂಡ ತಾಯಿ ಜುಬೈದಾ ಅವರು ಮಗಳನ್ನು ನೋಡಲು ಆಕೆಯ ಮನೆಗೆ ಧಾವಿಸುತ್ತಿದ್ದಾಗ, ನಿಶಾನ ಮೃತಪಟ್ಟಿರುವ ಸುದ್ದಿ ತಿಳಿದುಬಂದಿದೆ. ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಸೇರಿಕೊಂಡೇ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆಂದು ತಾಯಿ ಜುಬೈದಾ ಸುಳ್ಯ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/2026, ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 85, 103(1) ಜೊತೆಗೆ 3(5) ರಂತೆ ಕೊಲೆ ಹಾಗೂ ಗೃಹ ಹಿಂಸಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.
ಬಳಿಕ ಸುಳ್ಯ ಠಾಣಾ ಪೊಲೀಸರು ಜುಲೈ 22ರಂದು ಆರೋಪಿಗಳಾದ ಸಿ.ಪಿ. ಅಲವಿ, ಅಯಿಷಾ ಸಿ.ಎ. ಹಾಗೂ ಫಸಿಲಾ ಸಿ.ಎ. ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
