ನವದೆಹಲಿ: ಸೌಜನ್ಯ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಕೇಂದ್ರ ಸರ್ಕಾರದ ನೇತೃತ್ವದ ಸಿಬಿಐಗೆ ತೀವ್ರ ತರಾಟೆ ತೆಗೆದುಕೊಂಡಿದೆ. ಇಂದು ನಡೆದ ವಿಚಾರಣೆ ಕೇವಲ 23 ನಿಮಿಷಗಳಲ್ಲಿ ಮುಗಿದಿದೆ.
ಸೌಜನ್ಯ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ SIT ರಚಿಸುವಂತೆ ಕೋರಿದ್ದಾರೆ. ರಾಜ್ಯ ಸರ್ಕಾರದ ಗೃಹ ಇಲಾಖೆ ತನ್ನ ಎಲ್ಲಾ ತನಿಖಾ ಲೋಪದೋಷಗಳ ಜವಾಬ್ದಾರಿಯನ್ನು ಸಿಬಿಐ ಮೇಲೆ ಹಾಕಿದ್ದು, ಸೌಜನ್ಯ ಕೊಲೆ ಪ್ರಕರಣದ ಸಂಪೂರ್ಣ ವೈಫಲ್ಯಕ್ಕೆ ಕೇಂದ್ರ ಸರ್ಕಾರ ಮತ್ತು ಸಿಬಿಐಯೇ ಹೊಣೆ ಹೊರಬೇಕಾಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ನ್ಯಾಯಾಲಯದಲ್ಲಿ ಚರ್ಚೆಯಾಗಿದೆ.
ಕೊಲೆ ನಡೆದ ಸ್ಥಳದಲ್ಲಿ ಪ್ರಥಮ ಸ್ಥಳ ತನಿಖೆಯನ್ನು ಸಿಬಿಐ ಮಾಡಲೇ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ವಿಮರ್ಶಿಸಿದೆ. ಆರೋಪಿಗಳು ಹೈಕೋರ್ಟ್‌ನಲ್ಲಿ ತಮ್ಮ ಮೇಲಿನ ಆರೋಪಗಳ ರದ್ದುಗೊಳಿಸುವ ಅರ್ಜಿ ಸಲ್ಲಿಸಿದಾಗ ಸಿಬಿಐ ಅಕ್ಷೇಪ ತಕರಾರು ಸಲ್ಲಿಸದಿದ್ದುದಕ್ಕೆ ನ್ಯಾಯಮೂರ್ತಿಗಳು ಸಿಬಿಐಗೆ ತರಾಟೆ ತೆಗೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆಯಲ್ಲಿ ಗಂಭೀರ ಲೋಪಗಳಿದ್ದು, ಸುಪ್ರೀಂ ಕೋರ್ಟ್‌ನಿಂದ ಕಠಿಣ ನಿರ್ದೇಶನಗಳು ಬರಲು ಸಾಧ್ಯತೆ ಇದೆ ಎಂದು ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ.