ಉಳ್ಳಾಲ, ಜು. 22: ಮಹಾರಾಷ್ಟ್ರದ ಛತ್ರಪತಿ ಸಾಂಬಾಜಿ ನಗರದ ಗರ್ಕಡೆ ಸ್ಟೇಡಿಯಂನಲ್ಲಿ ಜುಲೈ 18ರಿಂದ 24ರವರೆಗೆ ನಡೆಯುತ್ತಿರುವ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 74 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಹೇಮಚಂದ್ರ ಬಬ್ಬುಕಟ್ಟೆ ಅವರು ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ, ತೊಕ್ಕೊಟ್ಟಿನ ಸದಸ್ಯರಾಗಿರುವ ಹೇಮಚಂದ್ರ ಬಬ್ಬುಕಟ್ಟೆ ಅವರು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ.
ಇವರು ದಿವಂಗತ ಶೇಖರ್ ಬಂಗೇರ ಅವರ ಶಿಷ್ಯರಾಗಿದ್ದು, ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿದ್ದಾರೆ. ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು, ವ್ಯಾಯಾಮ ಶಾಲೆಯ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.