ಕಾಸರಗೋಡು, ಜು. 22: ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತದ ಯುವ ಬರಹಗಾರರ ಸಾಹಿತ್ಯೋತ್ಸವದಲ್ಲಿ ತುಳು ಕವಿತೆ ವಾಚಿಸುವ ಮೂಲಕ ಗಡಿನಾಡಿನ ಪ್ರತಿಭೆ ದಿವ್ಯಾ ಗಟ್ಟಿ ಪರಕ್ಕಿಲ ಸಾವಿರಾರು ಸಾಹಿತ್ಯಾಸಕ್ತರ ಮೆಚ್ಚುಗೆ ಮತ್ತು ಭರ್ಜರಿ ಕರತಾಡನ ಗಳಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ತೆಲಂಗಾಣ ಸರ್ಕಾರದ ಭಾಷಾ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೈದರಾಬಾದ್‌ನ ರವೀಂದ್ರ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾದ ಈ ಸಾಹಿತ್ಯೋತ್ಸವದಲ್ಲಿ ದಕ್ಷಿಣ ಭಾರತದ ವಿವಿಧ ಭಾಷೆಗಳ ಯುವ ಬರಹಗಾರರು ಭಾಗವಹಿಸಿ ತಮ್ಮ ಸಾಹಿತ್ಯ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ದಿವ್ಯಾ ಗಟ್ಟಿ ಪರಕ್ಕಿಲ ಅವರು ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯನ್ನು ಪ್ರತಿಬಿಂಬಿಸುವ ತುಳು ಕವಿತೆಯನ್ನು ವಾಚಿಸಿದರು. ಬಳಿಕ ಅದರ ಆಶಯವನ್ನು ಆಂಗ್ಲ ಭಾಷೆಯಲ್ಲಿಯೂ ವಿವರಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಇದೇ ವೇಳೆ ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಹಾಗೂ ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ತುಳು ಭಾಷೆಯನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ತುಳು, ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ರಚಿಸುತ್ತಿರುವ ದಿವ್ಯಾ ಗಟ್ಟಿ ಪರಕ್ಕಿಲ ಅವರು ಸಾಹಿತ್ಯ ಸಂಘಟನೆ, ನಿರೂಪಣೆ, ರಂಗಭೂಮಿ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಮೊದಲ ಮಳೆ’ ಈಗಾಗಲೇ ಓದುಗರ ಮೆಚ್ಚುಗೆ ಪಡೆದಿದೆ.
ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ದಿವ್ಯಾ ಗಟ್ಟಿ ಪರಕ್ಕಿಲ ಅವರು ತಮ್ಮ ಹಿಲ್‌ಟಾಪ್ ಡಿಸೈನರ್ಸ್ & ಡೆವಲಪರ್ಸ್ ಸಂಸ್ಥೆಯ ಮೂಲಕ ವೃತ್ತಿ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಿದ್ದಾರೆ. ಜೊತೆಗೆ ರಂಗಕರ್ಮಿ ಹಾಗೂ ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅವರ ಸಾರಥ್ಯದ ನಾರಿಚಿನ್ನಾರಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿದ್ದು, ತುಳುನಾಡು ಮತ್ತು ಗಡಿನಾಡಿನ ಭಾಷೆ, ಸಂಸ್ಕೃತಿ ಹಾಗೂ ಅಸ್ತಿತ್ವದ ಸಂರಕ್ಷಣೆಯ ಹೋರಾಟಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.