Site icon Ullalavani

ಉಡುಪಿ: ಭೀಕರ ಅಪಘಾತ ಪ್ರಕರಣ- 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕನನ್ನ ಬಂಧಿಸಿದ ಪಡುಬಿದ್ರಿ ಪೊಲೀಸರು

ಉಡುಪಿ, ಜು. 21 : 2002ರಲ್ಲಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕನನ್ನು ಪಡುಬಿದ್ರಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ನಿವಾಸಿ ವಿಲಾಸ್ ಶಿಂಧೆ ಎಂದು ಗುರುತಿಸಲಾಗಿದೆ.2002ರ ಸೆಪ್ಟೆಂಬರ್ 7ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾ ಗ್ರಾಮದ ಮೂಳೂರು ಮಸೀದಿ ಸಮೀಪ ಅಪಘಾತ ಸಂಭವಿಸಿತ್ತು. ಮಂಗಳೂರಿನಿಂದ ಉಡುಪಿಯತ್ತ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಮಿನಿ ಸರಕು ಲಾರಿಯನ್ನು ಚಲಾಯಿಸುತ್ತಿದ್ದ ವಿಲಾಸ್ ಶಿಂಧೆ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕನಿಗೆ ಡಿಕ್ಕಿ ಹೊಡೆದಿದ್ದನು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು.ಘಟನೆಯ ಬಳಿಕ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿರುವುದಾಗಿ ತೀರ್ಪು ನೀಡಿ, ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ ವಿಧಿಸಿತ್ತು.ಆದರೆ ತೀರ್ಪು ಪ್ರಕಟವಾದ ಬಳಿಕ ವಿಲಾಸ್ ಶಿಂಧೆ ಅಧಿಕಾರಿಗಳ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ. ಕಳೆದ 23 ವರ್ಷಗಳಿಂದ ಯಾವುದೇ ಸುಳಿವು ನೀಡದೆ ಪರಾರಿಯಾಗಿದ್ದ ಹಿನ್ನೆಲೆ, ನ್ಯಾಯಾಲಯವು ಆತನ ವಿರುದ್ಧ ಎಲ್‌ಪಿಸಿ ವಾರಂಟ್ ಜಾರಿಗೊಳಿಸಿತ್ತು.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ಪಡುಬಿದ್ರಿ ಪೊಲೀಸ್ ಠಾಣೆಯ ವಿಶೇಷ ತಂಡ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಆರೋಪಿಯು ಪ್ರಸ್ತುತ ಪುಣೆಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಲಾಯಿತು.ಬಳಿಕ ಮಹಾರಾಷ್ಟ್ರಕ್ಕೆ ತೆರಳಿದ ವಿಶೇಷ ಪೊಲೀಸ್ ತಂಡ, ಆರೋಪಿ ವಿಲಾಸ್ ಶಿಂಧೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ

Exit mobile version