ಬೈಂದೂರು, ಜು. 20 : ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಐವರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರೂರು ಸಮೀಪದ ಸಮುದ್ರ ತೀರದಲ್ಲಿ ನಡೆದಿದೆ.
ರಕ್ಷಿಸಲ್ಪಟ್ಟ ಮೀನುಗಾರರನ್ನು ಪಡುವರಿ ಗ್ರಾಮದ ತರಪತಿ ಅಳ್ವೆಕೋಡಿಯ ನಿವಾಸಿಗಳಾದ ನಾಗರಾಜ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ನಾಗರಾಜ ಖಾರ್ವಿ ಎಂದು ಗುರುತಿಸಲಾಗಿದೆ.ಮಾಹಿತಿಯ ಪ್ರಕಾರ, ಮಲ್ಪೆಯಲ್ಲಿ ಮೀನುಗಾರಿಕೆ ಮುಗಿಸಿ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಶಿರೂರು ಸಮುದ್ರ ತೀರದ ಕೋಕ್ಲೇರಕಲ್ಲು ಪ್ರದೇಶದ ಬಳಿ ಬಿರುಗಾಳಿ ಹಾಗೂ ಮಳೆಯ ಪರಿಣಾಮ ಉಂಟಾದ ಬೃಹತ್ ಅಲೆಯೊಂದು ದೋಣಿಗೆ ಅಪ್ಪಳಿಸಿತು. ಪರಿಣಾಮ ದೋಣಿ ಮಗುಚಿಬಿದ್ದಿದೆ.ದೋಣಿಯಲ್ಲಿದ್ದ ಐವರು ಮೀನುಗಾರರು ಜೀವ ರಕ್ಷಕ ಜಾಕೆಟ್ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದೇ ವೇಳೆ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಶೇಖರ್ ಖಾರ್ವಿ ಘಟನೆ ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಐವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಅಪಘಾತದಲ್ಲಿ ಮೀನುಗಾರಿಕಾ ದೋಣಿ ಸಂಪೂರ್ಣ ಹಾನಿಗೊಳಗಾಗಿದೆ. ದೋಣಿಯ ಎಂಜಿನ್, ಜಿಪಿಎಸ್ ಸಾಧನ, ಫಿಶ್ ಫೈಂಡರ್, ಐದು ಸೆಟ್ ಮೀನುಗಾರಿಕಾ ಬಲೆಗಳು ಹಾಗೂ 30,000 ರೂ. ನಗದು ಸಮುದ್ರ ಪಾಲಾಗಿದೆ. ಘಟನೆಯಿಂದ 7 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಘಟನಾ ಸ್ಥಳಕ್ಕೆ ಕರಾವಳಿ ಭದ್ರತಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.