Site icon Ullalavani

ಬ್ಯಾರಿ ವಿದ್ಯಾರ್ಥಿಗಳಿಗೆ ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸುವರ್ಣಾವಕಾಶ

ಅರ್ಹ ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸಲಿರುವ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್

ಮಂಗಳೂರು, ಜು.20: ಬ್ಯಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಇಸ್ಲಾಮಿಕ್ ಶಿಕ್ಷಣ ಪಡೆಯಲು ಅಪರೂಪದ ಅವಕಾಶ ದೊರಕಿದ್ದು, ಈಜಿಪ್ಟ್‌ನ ಕೈರೋದಲ್ಲಿರುವ ವಿಶ್ವವಿಖ್ಯಾತ ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ (ಮಾಸ್ಟರ್ಸ್) ವ್ಯಾಸಂಗ ಮಾಡಲು ಇಚ್ಛಿಸುವ ಅರ್ಹ ವಿದ್ಯಾರ್ಥಿಗಳಿಗೆ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಪೂರ್ಣ ಪ್ರಾಯೋಜಕತ್ವ ಘೋಷಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಶಕೀಲ್, ಅಲ್-ಅಝ್ಹರ್ ವಿಶ್ವವಿದ್ಯಾಲಯವು ಇಸ್ಲಾಮಿಕ್ ಜ್ಞಾನ, ಸಂಶೋಧನೆ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಅನುಭವ, ಸಂಶೋಧನಾ ಅವಕಾಶಗಳು ಹಾಗೂ ಜಾಗತಿಕ ದೃಷ್ಟಿಕೋನ ಲಭಿಸಲಿದ್ದು, ಬ್ಯಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳ ಪ್ರಯಾಣ ವೆಚ್ಚ, ಶಿಕ್ಷಣ ಶುಲ್ಕ, ವಸತಿ, ಆಹಾರ ಹಾಗೂ ದೈನಂದಿನ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಟ್ರಸ್ಟ್ ಭರಿಸಲಿದೆ. ಅಲ್ಲದೆ, ವಿದೇಶಿ ವಿಶ್ವವಿದ್ಯಾಲಯದ ಶಿಕ್ಷಣ ವ್ಯವಸ್ಥೆ ಮತ್ತು ಜೀವನಶೈಲಿಗೆ ಹೊಂದಿಕೊಳ್ಳಲು ಅಗತ್ಯವಿರುವ ಮಾರ್ಗದರ್ಶನ, ಸಲಹೆ ಹಾಗೂ ನಿರಂತರ ಬೆಂಬಲವನ್ನೂ ಟ್ರಸ್ಟ್ ವತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.

ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜುಲೈ 20ರಿಂದ ಆಗಸ್ಟ್ 5ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9187415100 ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಲ್-ಅಝ್ಹರ್‌ನಂತಹ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಅವಕಾಶ ಕಲ್ಪಿಸುವುದು ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದ್ದು, ಇದರ ಮೂಲಕ ಜ್ಞಾನಸಂಪನ್ನ ಹಾಗೂ ಸಮಾಜಮುಖಿ ನಾಯಕರನ್ನು ರೂಪಿಸುವ ಆಶಯ ಹೊಂದಿದ್ದೇವೆ ಎಂದು ಡಾ. ಅಬ್ದುಲ್ ಶಕೀಲ್ ತಿಳಿಸಿದ್ದಾರೆ.

Exit mobile version