ಮಂಗಳೂರು: ಇಂದಿನ ಸ್ಪರ್ಧಾತ್ಮಕ ಕೃಷಿ ಕ್ಷೇತ್ರದಲ್ಲಿ ರೈತರು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಮಾತ್ರ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು.
ಐಎಟಿ, ಐಸಿಎಆರ್, ಕರ್ನಾಟಕ ಪ್ರದೇಶ ಕೃಷಿ ಸಮಾಜ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಸಮಾಜ, ಫುಡ್ ಚೈನ್ ಕ್ಯಾಂಪೇನ್ ಸಹಕಾರದೊಂದಿಗೆ ಕೃಷಿ ತಂತ್ರಜ್ಞಾನ ಸಂಸ್ಥೆ ದ.ಕ. – ಉಡುಪಿ ಜಿಲ್ಲಾ ಘಟಕವನ್ನು ನಗರದ ಎಕ್ಕೂರು ಮೀನುಗಾರಿಕಾ ವಿವಿ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಕೃಷಿಯ ದೊಡ್ಡ ಹೆಜ್ಜೆಯಾಗಲಿದೆ. ಗೇರು ಕೃಷಿ ಜಿಲ್ಲೆಯ ಪ್ರಮುಖ ಬೆಳೆ. ಇದಕ್ಕೆ ಇನ್ನೂ ಹೆಚ್ಚಿನ ವೈಜ್ಞಾನಿಕ, ತಂತ್ರಜ್ಞಾನ, ಮಾರುಕಟ್ಟೆಯ ಬೆಂಬಲ ಸಿಗಬೇಕಿದೆ. ಇದನ್ನು ಐಎಟಿ ಸಂಸ್ಥೆ ಮಾಡಲಿದೆ. ಗೇರು ಆದಾಯ ತರುವ ಬೆಳೆ. ಗೇರು ಸಹಿತ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಆಧಾರಿತ, ಹನಿನೀರಾವರಿ ಪದ್ಧತಿ ಮೂಲಕ ಆದಾಯ ಹೆಚ್ಚಳ ಸಾಧ್ಯವಿದೆ. ಇದು ತಾಂತ್ರಿಕತೆಗೆ ಮುನ್ನುಡಿಯಾಗಲಿದೆ. ವಿಜ್ಞಾನಿಗಳು ಇಂತಹ ಕೃಷಿ ತಂತ್ರಜ್ಞಾನ ಸಂಸ್ಥೆಯ ಮೂಲಕ ಕೃಷಿಕರಿಗೆ ಪೂರಕವಾದ ಕಾರ್ಯಕ್ರಮ, ಯೋಜನೆ ಮಾಡಬೇಕು ಎಂದರು. ಐಎಟಿ ಬೆಂಗಳೂರು ಅಧ್ಯಕ್ಷ ಎ.ಬಿ.ಪಾಟೀಲ್ ಮಾತನಾಡಿ, ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗೆ ಕೃಷಿ ತಂತ್ರಜ್ಞಾನ ಘಟಕ ಸಂಸ್ಥೆ ಬೇಕು ಎಂಬ ಯೋಚನೆಯಂತೆ ಇಲ್ಲಿ ಸಂಸ್ಥೆ ಆರಂಭಿಸಲಾಗಿದೆ. ರೈತರ ಸರ್ವತೋಮುಖ ಅಭಿವೃದ್ಧಿಗೆ ಕೃಷಿ ತಂತ್ರಜ್ಞಾನ ಸಂಸ್ಥೆ ದುಡಿಯುತ್ತಿದೆ. ರೈತರ, ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಬದಲಾದ ವಾತವರಣದಿಂದ ಮಳೆ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆಯಿಂದ ಆದಾಯ ವೃದ್ಧಿ ಸಾಧ್ಯವಿದೆ. ಸಂಸ್ಥೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರಂಭಿಸುವ ಉದ್ದೇಶ ಇದೆ ಎಂದರು.
ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಎಚ್.ಎನ್.ಆಂಜನೇಯಪ್ಪ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಐಎಟಿ ಬೆಂಗಳೂರು ಮ್ಯಾನೇಜಿಂಗ್ ಕಮಿಟಿ ಸದಸ್ಯ ಲೋಕೇಶ್ವರ್, ಐಎಟಿ ದ.ಕ., ಉಡುಪಿ ಉಪಾಧ್ಯಕ್ಷ, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಶೆಟ್ಟಿ, ಕೃಷಿ ಸಮಾಜ ರಾಜ್ಯ ನಿರ್ದೇಶಕ ಪದ್ಮನಾಭ ರೈ ಕಲ್ಲಡ್ಕ, ಮಂಗಳೂರು ಜಿಲ್ಲಾ ಕೃಷಿ ಸಮಾಜ ಅಧ್ಯಕ್ಷ ವಿಜಯ ಕುಮಾರ್ ರೈ, ಫುಟ್ ಚೈನ್ ಕಾಂಪೇನ್ ಸಂಸ್ಥಾಪಕ ಯತೀಶ್ ತುಕರಾಮ್ ಮತ್ತಿತರರು ಇದ್ದರು. ಐಸಿಎಆರ್-ಡಿಸಿಆರ್ ಪುತ್ತೂರಿನ ಡಾ.ದಿನಕರ ಅಡಿಗ ಕಾರ್ಯಗಾರ ನಡೆಸಿಕೊಟ್ಟರು. ಐಎಟಿ ದ.ಕ., ಉಡುಪಿ ಅಧ್ಯಕ್ಷ ಡಾ.ಎಸ್.ಎಂ.ಶಿವಪ್ರಕಾಶ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಐಎಟಿ ಕಾರ್ಯದರ್ಶಿ ಟಿ.ಜೆ.ರಮೇಶ್ ವಂದಿಸಿದರು. ಪ್ರದೀಪ್ ದೊಡ್ಮಣಿ ನಿರೂಪಿಸಿದರು.
ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿಗಣಿಸಬೇಕಿದೆ
ಹಿಂದೆ ತುಳುನಾಡು ಕೃಷಿ ಪ್ರಧಾನ ಪ್ರದೇಶವಾಗಿ ಗುರುತಿಸಿಕೊಂಡಿತ್ತು. ಆದರೆ ನಗರೀಕರಣ, ಕಾರ್ಮಿಕರ ಕೊರತೆ ಹಾಗೂ ಕೃಷಿಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗಣನೀಯವಾಗಿ ಕುಸಿದಿವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಯುವಕರು ಕೃಷಿಯನ್ನು ಕೇವಲ ಸಾಂಪ್ರದಾಯಿಕ ಉದ್ಯೋಗವೆಂದು ನೋಡುವುದನ್ನು ಬಿಟ್ಟು, ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳೊಂದಿಗೆ ಲಾಭದಾಯಕ ಉದ್ಯಮವಾಗಿ ಪರಿಗಣಿಸಬೇಕಿದೆ.ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನ, ನಿಖರ ಕೃಷಿ ), ಮಣ್ಣಿನ ಆರೋಗ್ಯ ನಿರ್ವಹಣೆ, ಮೌಲ್ಯವರ್ಧನೆ ಹಾಗೂ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಗಳಂತಹ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸಲು ಸಾಧ್ಯವಾಗುತ್ತದೆ. ಇಂತಹ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯಂತಹ ವೇದಿಕೆಗಳು ಮಹತ್ವದ ಪಾತ್ರ ವಹಿಸುತ್ತಿವೆ
ವಿವೇಕ್ ಆಳ್ವ
ಟ್ರಸ್ಟೀ
ಮೂಡಬಿದ್ರೆ ಆಳ್ವಾಸ್ ಸಂಸ್ಥೆ
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ಮೌಲ್ಯವರ್ಧಿತ ಕೃಷಿಯತ್ತ ರೈತರು ಹೆಚ್ಚಿನ ಒಲವು ತೋರಬೇಕಿದೆ . ಕೃಷಿ ತಂತ್ರಜ್ಞರ ಸಂಸ್ಥೆಯ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಡಂಬಿ ಸೇರಿದಂತೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು.ಸಾವಯವ ಕೃಷಿ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಸಮನ್ವಯದಿಂದ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಬಹುದಾಗಿದೆ. ಕೃಷಿ ತಂತ್ರಜ್ಞರು, ಸಂಶೋಧನಾ ಸಂಸ್ಥೆಗಳು ಮತ್ತು ರೈತರ ನಡುವಿನ ಸಮನ್ವಯವೇ ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕವಾಗಲಿದೆ. ಕೃಷಿ ಕ್ಷೇತ್ರದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಿದ್ದು, ಹೊಸ ತಂತ್ರಜ್ಞಾನ, ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆಗಳನ್ನು ಅಳವಡಿಸಿಕೊಂಡರೆ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಬಹುದಾಗಿದೆ ಎಂದು ಯತೀಶ್ ತುಕರಾಂ ತಿಳಿಸಿದರು.