ಮಂಜೇಶ್ವರ, ಜು. 18 : ಉದ್ಯಾವರ ಮಾಡ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳ ರು ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ವ್ಯಾಯಾಮ ಶಾಲೆಯಲ್ಲಿ ನಡೆಯಲಿರುವ ಪೂಜೆಯ ಸಿದ್ಧತೆಗಳಿಗಾಗಿ ಪದಾಧಿಕಾರಿಯೊಬ್ಬರು ಮುಂಜಾನೆ 5 ಗಂಟೆಗೆ ಆಗಮಿಸಿದಾಗ ಕಳವು ನಡೆದಿರುವುದು ಪತ್ತೆಯಾಗಿದೆ. ಕಳ್ಳರು ಕಬ್ಬಿಣದ ರಾಡ್ ಬಳಸಿ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ದೇವರ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ನಗದನ್ನು ದೋಚಿದ ಬಳಿಕ, ಖಾಲಿ ಡಬ್ಬಿಯನ್ನು ವ್ಯಾಯಾಮ ಶಾಲೆಯ ಮುಂಭಾಗದ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ವ್ಯಾಯಾಮ ಶಾಲೆಯ ಅಧ್ಯಕ್ಷ ಸದಾನಂದ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.