Site icon Ullalavani

ಜು.24ರಿಂದ 26ರವರೆಗೆ ಮುಡಿಪುವಿನಲ್ಲಿ ‘ಹಲಸು–2026’ ಆಹಾರೋತ್ಸವ

ಮುಡಿಪು, ಜು.18: ರೈತ ಕುಡ್ಲ ಪ್ರತಿಷ್ಠಾನದ ಆಶ್ರಯದಲ್ಲಿ, ಕುರ್ನಾಡು ಗ್ರಾಮ ಪಂಚಾಯತ್, ಕೃಷಿಕ ಸಮಾಜ ಉಳ್ಳಾಲ ತಾಲೂಕು ಹಾಗೂ ಲಯನ್ಸ್ ಕ್ಲಬ್ ಮುಡಿಪು ಇವರ ಸಹಯೋಗದಲ್ಲಿ ‘ಹಲಸು–2026’ ಆಹಾರೋತ್ಸವವು ಜುಲೈ 24, 25 ಮತ್ತು 26ರಂದು ಮುಡಿಪು ಆಡಿಟೋರಿಯಂನಲ್ಲಿ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಆಹಾರೋತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮುಡಿಪುವಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶೇಷ ಹಲಸು ಮೇಳವನ್ನು ಆಯೋಜಿಸಲಾಗುತ್ತಿದ್ದು, ಹಲಸಿನ ವೈವಿಧ್ಯಮಯ ಆಹಾರ ಪದಾರ್ಥಗಳು, ಸಾಂಪ್ರದಾಯಿಕ ಕಲೆ, ಗ್ರಾಮೀಣ ಆಟಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿವೆ.

ಮೇಳದಲ್ಲಿ ಚೆನ್ನೆಮಣೆ ಆಟ, ಆಟಿಕಳೆಂಜ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ಹಲಸಿನ ಬಿಸಿ ಬಿಸಿ ಹೋಳಿಗೆ, ಜಿಲೇಬಿ, ಗರಿಗರಿ ಹಪ್ಪಳ, ಚಿಪ್ಸ್, ಹಲಸಿನ ಕಬಾಬ್, ಮುಲ್ಕ, ಹಲಸಿನ ಶೀರಾ, ಪಾಯಸ, ಜಾಮ್, ನೈಸರ್ಗಿಕ ಹಣ್ಣುಗಳ ಐಸ್‌ಕ್ರೀಂ ಸೇರಿದಂತೆ ವಿವಿಧ ಹಲಸಿನ ಖಾದ್ಯಗಳನ್ನು ಸವಿಯುವ ಅವಕಾಶ ಇರಲಿದೆ.

ಇದರ ಜೊತೆಗೆ ಹೂವು ಹಾಗೂ ಹಣ್ಣಿನ ಸಸ್ಯಗಳ ಮಾರಾಟ, ವೈವಿಧ್ಯಮಯ ಮಾವಿನ ಪ್ರದರ್ಶನ ಮತ್ತು ಮಾರಾಟ, ಕೆಂಪು, ಬಿಳಿ ಹಾಗೂ ಬಂಗಾರ ವರ್ಣದ ಹಲಸಿನ ಪ್ರದರ್ಶನ ಮತ್ತು ಮಾರಾಟ, ಆಟಿ ತಿಂಗಳ ಸಾಂಪ್ರದಾಯಿಕ ಆಹಾರಗಳ ಸವಿಯುವ ಅವಕಾಶ ಹಾಗೂ ಹಲಸು ಭಾರ ಎತ್ತುವ ಸ್ಪರ್ಧೆಯೂ ಆಯೋಜಿಸಲಾಗಿದೆ.

Exit mobile version