Site icon Ullalavani

ಜು.18 ಕ್ಕೆ (ಇಂದು) ಕೃಷಿ ತಂತ್ರಜ್ಞರ ಸಂಸ್ಥೆ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕ ಉದ್ಘಾಟಿಸಲಿರುವ ಸಚಿವ ಯು.ಟಿ. ಖಾದರ್‌

ಮಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆ (ಬೆಂಗಳೂರು)ಯ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ “ಆಧುನಿಕ ಗೋಡಂಬಿ ಕೃಷಿ ತಂತ್ರಜ್ಞಾನಗಳು ಮತ್ತು ನೆಡುತೋಪು ಬೆಳೆಗಳಿಗೆ ಪರ್ಯಾಯ ಸಾವಯವ ಗೊಬ್ಬರಗಳ ಬಳಕೆ” ಕುರಿತ ವಿಚಾರ ಸಂಕಿರಣವು ಶನಿವಾರ (ಜು.18) ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರಿನಲ್ಲಿ ಬೆಳಿಗ್ಗೆ 10 ಕ್ಕೆ ನಡೆಯಲಿದೆ.ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಲಿದ್ದಾರೆ.  ಫುಡ್‌ ಚೈನ್‌ ಕ್ಯಾಂಪೇನ್‌ ಸಹಯೋಗದಲ್ಲಿ  ಕಾರ್ಯಕ್ರಮ ನಡೆಯಲಿದ್ದು, ಫುಡ್‌ ಚೈನ್‌  ಸ್ಥಾಪಕರು ಹಾಗೂ  ಕರ್ನಾಟಕ ರಾಜ್ಯ ರೈತ ಸಂಘ ಯುವವೇದಿಕೆ ಅಧ್ಯಕ್ಷರು  ಯತೀಶ್‌ ತುಕರಾಂ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

1968ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಕೃಷಿ ತಂತ್ರಜ್ಞರ ಸಂಸ್ಥೆಯು ರಾಜ್ಯದಾದ್ಯಂತ ಸುಮಾರು 6,000ಕ್ಕೂ ಅಧಿಕ ಕೃಷಿ ಹಾಗೂ ಕೃಷಿ ಸಂಬಂಧಿತ ಪದವೀಧರರನ್ನು ಆಜೀವ ಸದಸ್ಯರನ್ನಾಗಿ ಹೊಂದಿದೆ. ರಾಜ್ಯದಲ್ಲಿ ಈಗಾಗಲೇ 22 ಜಿಲ್ಲಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕವು 23ನೇ ಘಟಕವಾಗಿ ಆರಂಭಗೊಳ್ಳುತ್ತಿದೆ. ಸಂಸ್ಥೆಯ ಪ್ರಮುಖ ಉದ್ದೇಶ ಕೃಷಿಕರ ತಾಂತ್ರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸುವುದಾಗಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಬ್ಯಾಂಕಿಂಗ್ ಹಾಗೂ ಕೃಷಿ ಪರಿಕರ ಕ್ಷೇತ್ರದ ಪರಿಣಿತರನ್ನು ಒಂದೇ ವೇದಿಕೆಗೆ ಕರೆತಂದು ರೈತರಿಗೆ ವೈಜ್ಞಾನಿಕ ಸಲಹೆಗಳನ್ನು ನೀಡುವುದು ಸಂಸ್ಥೆಯ ಧ್ಯೇಯವಾಗಿದೆ.

ರೈತರು ಹಾಗೂ ಸದಸ್ಯರಿಗಾಗಿ ವಿಚಾರ ಸಂಕಿರಣ, ಸಮ್ಮೇಳನ, ಗುಂಪುಚರ್ಚೆ, ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸುವುದರ ಜೊತೆಗೆ ಜಿಲ್ಲೆಯ ಸಮಗ್ರ ಕೃಷಿ ಅಭಿವೃದ್ಧಿಗೆ ಜಿಲ್ಲಾಡಳಿತಕ್ಕೆ ಸಲಹೆ ನೀಡುವುದು, ಕೃಷಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಒದಗಿಸುವ ಕಾರ್ಯಗಳನ್ನೂ ಸಂಸ್ಥೆ ಕೈಗೊಳ್ಳಲಿದೆ. ಮೀನುಗಾರಿಕೆ, ಗೋಡಂಬಿ ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ರಫ್ತು ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡುವುದು ಮತ್ತು ರೈತರನ್ನು ಅವುಗಳ ಸದುಪಯೋಗಕ್ಕೆ ಪ್ರೇರೇಪಿಸುವುದೂ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿಕ ಸಮಾಜ ಜಿಲ್ಲಾ ಘಟಕ, ರಾಷ್ಟ್ರೀಯ ಗೋಡಂಬಿ ಸಂಶೋಧನಾ ಸಂಸ್ಥೆ ಪುತ್ತೂರು ಹಾಗೂ ಫುಡ್ ಚೈನ್ ಕ್ಯಾಂಪೇನ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕದಲ್ಲಿ 50 ಆಜೀವ ಸದಸ್ಯರಿದ್ದು, ಕಂಕನಾಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಘಟಕದ ಕಾರ್ಯಾಲಯವನ್ನು ಆರಂಭಿಸಲಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ನಾಲ್ವರು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಇಬ್ಬರು ಕೋ-ಆಪ್ಟೆಡ್ ಸದಸ್ಯರನ್ನು ಒಳಗೊಂಡ 11 ಸದಸ್ಯರ ಆಡಳಿತ ಮಂಡಳಿ ರಚಿಸಲಾಗಿದೆ.

ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರದ ಮಹದೇವಪ್ಪ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್‌ ಗಟ್ಟಿ, ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ, ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ಎ.ಬಿ. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶಿವಪ್ರಕಾಶ್, ಬೋಲಾಸ್ ರಾಹುಲ್ ರಾವ್, ಡಾ. ಆಂಜನೇಯಪ್ಪ, ವಿಜಯಕುಮಾರ ರೈ, ಪದ್ಮನಾಭ ರೈ, ಕಾರ್ಯದರ್ಶಿ ಡಾ. ರಮೇಶ್, ಲೋಕೇಶ್ವರ ಸೇರಿದಂತೆ ಹಲವರು ಉಪಸ್ಥಿತರಿರುವರು. ರಾಷ್ಟ್ರೀಯ ಗೋಡಂಬಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗ ಹಾಗೂ ವಿಜ್ಞಾನಿಗಳು ಆಧುನಿಕ ಗೋಡಂಬಿ ಕೃಷಿ ತಂತ್ರಜ್ಞಾನಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಸಮಾರಂಭದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು, ಕೃಷಿಕ ಸಮಾಜದ ಸದಸ್ಯರು, ಗೋಡಂಬಿ ಬೆಳೆಗಾರರು, ಆಳ್ವಾಸ್ ಕೃಷಿ ಕಾಲೇಜಿನ ವಿದ್ಯಾರ್ಥಿಗಳು, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version