Site icon Ullalavani

ಅರ್. ಅಶೋಕ್ ಅವರ ಹೇಳಿಕೆ ಯುವ ಸಮುದಾಯಕ್ಕೆ ಮಾಡಿದ ಅಪಮಾನ: ಇಬ್ರಾಹಿಂ ನವಾಜ್ ತೀವ್ರ ಖಂಡನೆ

ಮಂಗಳೂರು: ‘ಭಾರತ್ ಜೋಡೋ ಯುವ ಸಂಘ’ದ ಕುರಿತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರು ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಯು ರಾಜ್ಯದ ಇಡೀ ಯುವ ಸಮುದಾಯಕ್ಕೆ ಮಾಡಿದ ಘೋರ ಅಪಮಾನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದ ಯುವಕರನ್ನು ಒಗ್ಗೂಡಿಸಿ, ಅವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಯನ್ನು ರಾಜಕೀಯ ದುರುದ್ದೇಶದಿಂದ ಟೀಕಿಸಿರುವುದು ಆರ್. ಅಶೋಕ ಅವರ ಯುವ ವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ.

ವಿರೋಧ ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯುವ ಸಮುದಾಯದ ಆಶೋತ್ತರಗಳನ್ನು ಲೇವಡಿ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರಿಗೆ ಶೋಭಿಸುವುದಿಲ್ಲ.

ಸಮಾಜವನ್ನು ಜೋಡಿಸುವ ಕೆಲಸವನ್ನು ಸಹಿಸದ ಬಿಜೆಪಿ ನಾಯಕರು, ಸದಾ ಒಡೆಯುವ ರಾಜಕಾರಣಕ್ಕಷ್ಟೇ ಆದ್ಯತೆ ನೀಡುತ್ತಿದ್ದಾರೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ.

ಆರ್. ಅಶೋಕ ಅವರು ತಕ್ಷಣವೇ ರಾಜ್ಯದ ಯುವ ಸಮುದಾಯದ ಕ್ಷಮೆಯಾಚಿಸಬೇಕು. ಯುವಕರ ಏಳಿಗೆಯನ್ನು ಸಹಿಸದ ಇಂತಹ ನಾಯಕರಿಗೆ ಮುಂಬರುವ ದಿನಗಳಲ್ಲಿ ರಾಜ್ಯದ ಯುವಶಕ್ತಿ ತಕ್ಕ ಪಾಠ ಕಲಿಸಲಿದೆ.

ಯುವಕರ ಹಾದಿ ತಪ್ಪಿಸುವ ಮತ್ತು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಇಂತಹ ಪ್ರಯತ್ನಗಳು ಸಫಲವಾಗುವುದಿಲ್ಲ. ಭಾರತ್ ಜೋಡೋ ಯುವ ಸಂಘವು ಯುವಕರ ಧ್ವನಿಯಾಗಿ ಇನ್ನಷ್ಟು ಬಲವಾಗಿ ಕೆಲಸ ಮಾಡಲಿದೆ ಎಂದು ಇಬ್ರಾಹಿಂ ನವಾಜ್ ಎಚ್ಚರಿಸಿದ್ದಾರೆ

Exit mobile version