Site icon Ullalavani

ಬಿಸಿ ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿಯ ಭಾವಚಿತ್ರ ತಿರುಚಿ ಬಜರಂಗದಳದ ವಿರುದ್ಧ ಅಪಪ್ರಚಾರ; ಪ್ರಕರಣ ದಾಖಲು

ಬಂಟ್ವಾಳ: ಬಿಸಿ ರೋಡ್‌ನಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ ಬಜರಂಗದಳದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಕುರಿತು ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಕೇಶವ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಯುವತಿ ಹತ್ಯೆ ಪ್ರಕರಣದ ಆರೋಪಿಯ ತಿರುಚಿದ ಭಾವಚಿತ್ರದೊಂದಿಗೆ, ಆತ ಬಜರಂಗದಳದ ಮುಖಂಡ ಚೇತನ ಹಾಗೂ ಬಜರಂಗದಳದ ಶಾಖೆಯಲ್ಲಿ ತರಬೇತಿ ಪಡೆದಿದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಆರೋಪಿಯ ತಿರುಚಿದ ಭಾವಚಿತ್ರ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ವಿವಿಧ ವಾಟ್ಸ್‌ಆ್ಯಪ್ ಗುಂಪುಗಳು ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದ್ದು, ಇದರಿಂದ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಹಾಗೂ ಕೋಮು ಉದ್ವಿಗ್ನತೆ ಮತ್ತು ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ಮಾಹಿತಿಯನ್ನು ಹರಡಿರುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

ದೂರಿನ ಆಧಾರದ ಮೇಲೆ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Exit mobile version