ಮಂಗಳೂರು, ಜು.15: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ ನಡೆಯಲಿರುವ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬುಧವಾರ ವಿವಿಧ ಧಾರ್ಮಿಕ ಹಾಗೂ ಸಂಘಟನಾ ಕಾರ್ಯಕ್ರಮಗಳು ನಡೆದವು.
ಈ ಪ್ರಯುಕ್ತ ಶರವು ರಾಧಾಕೃಷ್ಣ ದೇವಸ್ಥಾನದಲ್ಲಿ ಶ್ರೀ ಗಣಪತಿ ದೇವರ ವಿಗ್ರಹದ ಮುಹೂರ್ತ ಸಮಾರಂಭವು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಹಾಗೂ ಡಾ. ಆಶಾಜ್ಯೋತಿ ರೈ ದಂಪತಿ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಬಳಿಕ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಕೃಷ್ಣಪ್ರಸಾದ್ ರೈ, ಶೆಡ್ಡೆ ಮಂಜುನಾಥ ಭಂಡಾರಿ ಹಾಗೂ ಬಾಲಕೃಷ್ಣ ಶೆಟ್ಟಿ ಲಾನ್ಸ್ ವೇ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್‌ಗುತ್ತು, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಮಾತೃಸಂಘದ ಕಚೇರಿ ಆವರಣದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಚೇರಿಯನ್ನು ಉದ್ಘಾಟಿಸಲಾಯಿತು. ಶಶಿಕಲಾ ಸುಂದರ್ ಶೆಟ್ಟಿ, ಶಾಲಿನಿ ಎಸ್. ಶೆಟ್ಟಿ, ಸಂಗೀತಾ ಗಣೇಶ್ ಶೆಟ್ಟಿ, ಮಲ್ಲಿಕಾ ಪ್ರಸಾದ್ ಶೆಟ್ಟಿ ಹಾಗೂ ಶಶಿ ಸುಭಾಷ್ ರೈ ಅವರು ಕಚೇರಿಯನ್ನು ಉದ್ಘಾಟಿಸಿದರು.
ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ಸದಾಶಿವ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿಜೈ ಜಗದೀಶ್ ಶೆಟ್ಟಿ ವಂದಿಸಿದರು.