ಉಳ್ಳಾಲ; ಗಿಡ ನೆಡುವುದಷ್ಟೇ ಸಾಕಾಗುವುದಿಲ್ಲ, ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯೂ ಪ್ರತಿಯೊಬ್ಬರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಗಿಡ-ಮರಗಳ ನಾಶದಿಂದ ಮಳೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿದ್ದು, ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದಂತಹ ವಿಶೇಷ ದಿನಗಳಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಭಾರತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯಶವಂತ್ ಅಮೀನ್ ಅಭಿಪ್ರಾಯಪಟ್ಟರು.
ಇವರು ಭಾರತ್ ಸಮೂಹ ಶಿಕ್ಷಣ ಸಂಸ್ಥೆ, ಸಹ್ಯಾದ್ರಿ ಸಂಚಯ, ಗ್ಲೋಬಲ್ ಗ್ರೀನ್ ಟೈರ್ಸ್ ಮಂಗಳೂರು ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಾಸ್ತಿಕಟ್ಟೆಯಲ್ಲಿ ನಡೆದ ದಿನೇಶ್ ಹೊಳ್ಳ ಅವರ 60ನೇ ಜನ್ಮದಿನದ ಅಂಗವಾಗಿ, ಅವರ ತಾಯಿ ಯಮುನಾ ಹೊಳ್ಳ ಅವರ ಸ್ಮರಣಾರ್ಥ 60 ಗಿಡಗಳನ್ನು ನೆಡುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತ್ ಶಿಕ್ಷಣ ಸಮೂಹ ಸಂಸ್ಥೆಯ ಸಂಚಾಲಕ ರೋಹಿದಾಸ್ ಬಂಗೇರ ಮಾತನಾಡಿ, ತಾಯಿಯ ಸ್ಮರಣಾರ್ಥ 60 ಗಿಡಗಳನ್ನು ನೆಡುವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ. ಅರಣ್ಯ ನಾಶ ಮತ್ತು ಮರಗಳ ಕಡಿತದಿಂದ ಪ್ರಕೃತಿ ಸಮತೋಲನ ಹದಗೆಡುತ್ತಿದ್ದು, ಮಳೆ ಕೊರತೆ ಹಾಗೂ ಪರಿಸರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಶುದ್ಧ ಆಮ್ಲಜನಕ ಮತ್ತು ಆರೋಗ್ಯಕರ ಬದುಕಿಗಾಗಿ ಗಿಡಮರಗಳ ಸಂರಕ್ಷಣೆ ಅತ್ಯಗತ್ಯ. ತಮ್ಮ ಸಂಸ್ಥೆ ಮೂಲಕ ಇನ್ನಷ್ಟು ಪರಿಸರ ಕಾಳಜಿಯ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ದಿನೇಶ್ ಹೊಳ್ಳ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದಂದು ಒಂದು ಗಿಡವನ್ನು ನೆಟ್ಟು ಅದನ್ನು ಸಾಕಿ ಬೆಳೆಸಿದರೆ ದೇಶವೇ ಹಸಿರಿನಿಂದ ಕಂಗೊಳಿಸಲಿದೆ. ಇದರಿಂದ ಬರಗಾಲ, ಅಧಿಕ ತಾಪಮಾನ ಹಾಗೂ ಪ್ರಕೃತಿ ವಿಕೋಪಗಳನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗಿರಿಧರ್ ಕಾಮತ್, ಹರೀಶ್ ಅಡ್ಯಾರ್, ರಾಕೇಶ್ ಬೋಳಾರ್, ರಾಜೇಶ್ ದೇವಾಡಿಗ, ಸಪ್ನಾ ನೊರೋನ್ಹಾ, ದಿನೇಶ್ ಕೊಡ್ಯಾಲ್‌ಬೈಲ್, ಸ್ನೇಕ್ ಕಿರಣ್, ಹರೀಶ್ ರಾಜ್, ರಾಜಮಣಿ ರಾಮಕುಂಜ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ದಿವ್ಯಾ ರೈ, ಸುನಿಲ್ ಅತ್ತಾವರ, ಅನಂತ ಪದ್ಮನಾಭ ರಾವ್ ಸೇರಿದಂತೆ ಹಲವಾರು ಗಣ್ಯರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ‘ವನಚೇತನಾ’ ಕಾರ್ಯಕ್ರಮದಡಿ 60 ಬುಡಕಟ್ಟು ಶಾಲೆಗಳಿಗೆ ಸಾಮಾನ್ಯ ಜ್ಞಾನ, ಇತಿಹಾಸ, ಸ್ವಾತಂತ್ರ‍್ಯ ಹೋರಾಟ, ವೀರಪುರುಷರು ಹಾಗೂ ನೀತಿಕಥೆಗಳ ಪುಸ್ತಕಗಳನ್ನು ವಿತರಿಸಿ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸುವ ಕಾರ್ಯವನ್ನೂ ತಮ್ಮ 60ನೇ ಜನ್ಮದಿನದ ಅಂಗವಾಗಿ ಕೈಗೊಳ್ಳಲಾಗುತ್ತಿದೆ.
ದಿನೇಶ್ ಹೊಳ್ಳ