ಮಂಗಳೂರು: ಮಂಗಳೂರು ನಗರದ ಕೈಕಂಬ ಬಳಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಕೌಟುಂಬಿಕ ವಿಷಯಗಳನ್ನು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಫೋನ್ ಮೂಲಕ ಕಿರುಕುಳ ನೀಡಿ, ಮಾನಸಿಕ ಹಿಂಸೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಳಲಿ ನಿವಾಸಿಗಳಾದ ಕಿರಣ್ ಕೊಟ್ಟಾರಿ ಮತ್ತು ರಾಜ್ ಮಾರ್ಲ ಪ್ರಕರಣದ ಆರೋಪಿಗಳು. ಇವರಿಬ್ಬರೂ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.
ದೂರುದಾರರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ದೂರುದಾರರ ಪತಿಯ ಸ್ನೇಹಿತನಾಗಿದ್ದು ಸುಮಾರು ಐದು ವರ್ಷಗಳಿಂದ ಪರಿಚಿತರಿದ್ದ ಕಿರಣ್ ಕೊಟ್ಟಾರಿ, ಸಂತ್ರಸ್ತೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಮಾರ್ಚ್ 10, 2026 ರಿಂದ ನಿರಂತರವಾಗಿ ಕರೆ ಮಾಡುತ್ತಿದ್ದನು. ಪ್ರೀತಿಯ ಹೆಸರಿನಲ್ಲಿ ಆಮಿಷವೊಡ್ಡಿ, ದೂರುದಾರರನ್ನು ಹಿಂಬಾಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ಈ ವಿಷಯವನ್ನು ದೂರುದಾರರು ವಿದೇಶದಲ್ಲಿರುವ ತಮ್ಮ ಪತಿಗೆ ತಿಳಿಸಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳಿಬ್ಬರೂ ಸಂಘಟಿತವಾಗಿ ದೂರುದಾರರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಿರಣ್ ಕೊಟ್ಟಾರಿಯು ದೂರುದಾರರ ಬಗ್ಗೆ ತಪ್ಪು ಮಾಹಿತಿಯನ್ನು ದೂರುದಾರರ ಕುಟುಂಬದವರಿಗೆ ನೀಡುತ್ತಿದ್ದರೆ, ರಾಜ್ ಮಾರ್ಲನು ದೂರುದಾರರು ಬೇರೆ ಪುರುಷರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾನೆ.
ಜೂನ್ 27, 2026 ರಂದು ರಾತ್ರಿ ಕೈಕಂಬದ ಚರ್ಚ್ ಬಳಿ ದೂರುದಾರರನ್ನು ತಡೆದ ಕಿರಣ್ ಕೊಟ್ಟಾರಿ, ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, “ಇನ್ನು ಮುಂದೆ ಈ ವಿಷಯ ಕೇಳಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂ: 28/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 78, 79, 352, ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯು ಮಾರ್ಚ್ 10 ರಿಂದ ಜೂನ್ 27, 2026 ರ ಅವಧಿಯಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ತನಿಖಾಧಿಕಾರಿಗಳು ಈಗಾಗಲೇ ದೂರುದಾರರ ಹೇಳಿಕೆಯನ್ನು ಪಡೆದಿದ್ದು, ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
