
ಮಂಗಳೂರು: ಸೈಬರ್ ಅಪರಾಧದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಭಾವನಾತ್ಮಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಪ್ಯಾನ್ ಇಂಡಿಯಾ ʻಅಚ್ಚುತ ಅವತಾರಂ ʼ ಚಲನಚಿತ್ರವು ಜುಲೈ 17ರಂದು ದೇಶಾದ್ಯಂತ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ರುದ್ರಮೂರ್ತಿ ತಿಳಿಸಿದರು.
ನಗರದ ಬಿಗ್ ಸಿನಿಮಾಸ್ನಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಮಾಜಮುಖಿ ಸಂದೇಶವನ್ನು ಒಳಗೊಂಡಿದೆ ಎಂದರು.
ಚಿತ್ರದ ಕಥೆಯಲ್ಲಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಬೆಳೆದ ಯುವತಿಯೊಬ್ಬಳು ಸೈಬರ್ ಅಪರಾಧದಿಂದ ತನ್ನ ಆತ್ಮೀಯ ವ್ಯಕ್ತಿಯನ್ನು ಕಳೆದುಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಗ್ಗದೆ, ಧೈರ್ಯದಿಂದ ಎದ್ದು ನಿಂತು ಸೈಬರ್ ವಂಚಕರ ವಿರುದ್ಧ ಹೋರಾಟ ಆರಂಭಿಸುತ್ತಾಳೆ. ಆಕೆಯ ಜೀವನದಲ್ಲಿ ನಡೆಯುವ ಪರಿವರ್ತನೆ, ನ್ಯಾಯಕ್ಕಾಗಿ ನಡೆಸುವ ಹೋರಾಟ ಹಾಗೂ ಸಮಾಜವನ್ನು ಡಿಜಿಟಲ್ ವಂಚನೆಗಳಿಂದ ರಕ್ಷಿಸುವ ಸಂಕಲ್ಪವೇ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.
ಆಧ್ಯಾತ್ಮ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು, ಆಧುನಿಕ ತಂತ್ರಜ್ಞಾನ ಮತ್ತು ಸಸ್ಪೆನ್ಸ್ ಅಂಶಗಳನ್ನು ಸಮನ್ವಯಗೊಳಿಸಿರುವ ಈ ಚಿತ್ರವು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಾಮಾಜಿಕ ಕಾಳಜಿಯ ಸಂದೇಶವನ್ನು ತಲುಪಿಸಲಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳು, ಡಿಜಿಟಲ್ ಮೋಸಗಳು ಹಾಗೂ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವನ್ನು ಚಿತ್ರ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ದೇಶದ ಪ್ರತಿಯೊಬ್ಬ ಪ್ರೇಕ್ಷಕರಿಗೂ ಈ ಕಥೆ ತಲುಪಬೇಕು ಎಂಬ ಉದ್ದೇಶದಿಂದ ಚಿತ್ರವನ್ನು ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ನಿರ್ಮಿಸಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುವ ಭಾವನಾತ್ಮಕ ಕಥೆ, ರೋಚಕ ನಿರೂಪಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶ ಈ ಚಿತ್ರದ ವಿಶೇಷತೆಯಾಗಿದೆ ಎಂದು ನಿರ್ಮಾಪಕ ರುದ್ರಮೂರ್ತಿ ಹೇಳಿದರು. ಜುಲೈ 17ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಈ ಪ್ಯಾನ್ ಇಂಡಿಯಾ ಚಿತ್ರವು ಸೈಬರ್ ಜಾಗೃತಿಯೊಂದಿಗೆ ಹೊಸ ರೀತಿಯ ಸಿನಿ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ನಿರ್ದೇಶಕ ಪುನೀತ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಈಗಾಗಲೇ ತನ್ನ ವಿಭಿನ್ನ ಕಥಾಹಂದರ, ಭಾವನಾತ್ಮಕ ನಿರೂಪಣೆ ಹಾಗೂ ಸಾಮಾಜಿಕ ಸಂದೇಶದ ಮೂಲಕ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೆವಿಎನ್ (KVN) ಸಂಸ್ಥೆಯು ದಕ್ಷಿಣ ಭಾರತದಾದ್ಯಂತ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ವಿದೇಶಗಳಲ್ಲಿಯೂ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ವಿಶ್ವದಾದ್ಯಂತ ಭಾರತೀಯ ಸಿನಿಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
ಕಾಂತಾರ ಚಿತ್ರದಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ ತುಳುನಾಡಿನ ‘ಕಾಡಿನ ಸೊಪ್ಪು ಬೇಕಾ’ ಖ್ಯಾತಿಯ ಚಂದ್ರಕಲಾ ಮೇಡಂ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ಚಿತ್ರತಂಡಕ್ಕೆ ದೊಡ್ಡ ಬಲವಾಗಿದೆ. ಅಲ್ಲದೆ, ಕನ್ನಡ ಚಿತ್ರರಂಗದ ಪ್ರಸಿದ್ಧ ವಿತರಣಾ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಚಿತ್ರದ ವಿತರಣೆಯ ಹೊಣೆ ಹೊತ್ತು ಬೆಂಬಲ ಸೂಚಿಸಿರುವುದು ಚಿತ್ರದ ಆರಂಭಿಕ ಯಶಸ್ಸಿನ ಪ್ರಮುಖ ಹೆಜ್ಜೆಯಾಗಿದೆ ಎಂದು ಚಿತ್ರದ ನಿರ್ದೇಶಕ ರುದ್ರಮೂರ್ತಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
