Site icon Ullalavani

ಕಾಸರಗೋಡು : ಮಂಜೇಶ್ವರದಲ್ಲಿ ನಿಯಮ ಗಾಳಿಗೆ ತೂರಿ ಅಪಾಯಕಾರಿ ಈಜು – ಪೊಲೀಸರ ದಾಳಿ

ಕಾಸರಗೋಡು, ಜು. 14 : ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಜಲಮೂಲಗಳು ಮಕ್ಕಳ ಮೋಜಿನ ತಾಣವಾಗಿದ್ದರೆ, ಪೋಷಕರಿಗೆ ಆತಂಕ ತಂದಿಟ್ಟಿವೆ. ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಚಲಿಕೆ, ಇಡಿಯ ಪಾಪಿಲ ಹಾಗೂ ಗೋವಿಂದ ಪೈ ಡ್ಯಾಂ ಪ್ರದೇಶಗಳಲ್ಲಿ ಯುವಕರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅಪಾಯಕಾರಿ ರೀತಿಯಲ್ಲಿ ಈಜು ಪ್ರದರ್ಶನ ನೀಡುತ್ತಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಸ್ಥಳೀಯರು ಮಾತ್ರವಲ್ಲದೆ ದೂರದ ಊರುಗಳಿಂದಲೂ ಯುವಕರು ಇಲ್ಲಿಗೆ ಆಗಮಿಸುತ್ತಿದ್ದು, ಎತ್ತರದ ಜಾಗದಿಂದ ನೀರಿಗೆ ಜಿಗಿಯುವುದು, ಪೈಪೋಟಿಗಿಳಿಯುವುದು ನಿರಂತರವಾಗಿದೆ. ಇದರ ಜೊತೆಗೆ, ಈ ನಿರ್ಜನ ಪ್ರದೇಶಗಳಲ್ಲಿ ಮಾದಕ ದಂಧೆಯಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ಪ್ರದೇಶಗಳಲ್ಲಿ ಈಜುವುದನ್ನು ನಿಷೇಧಿಸಿ ಪೊಲೀಸ್ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಸದ್ಯ ಮಂಜೇಶ್ವರ ಪೊಲೀಸರು ಬಾಚಲಿಕೆ ಕೆರೆಗೆ ದಾಳಿ ನಡೆಸಿ, ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕ್ರಮದ ಹೊರತಾಗಿಯೂ, ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕಾದ ಅಗತ್ಯವಿದೆ.

Exit mobile version