ಮಂಗಳೂರು, ಜುಲೈ 13: ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಬಳಿಕ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.
30 ಮೇ 2025ರಂದು ಬೆಳಿಗ್ಗೆ ಸುಮಾರು 4 ಗಂಟೆಗೆ ಸಂಭವಿಸಿದ ಈ ದುರಂತದಲ್ಲಿ ಅಶ್ವಿನಿ ಅವರ ಇಬ್ಬರು ಮಕ್ಕಳು ಹಾಗೂ ಅತ್ತೆ ಮೃತಪಟ್ಟಿದ್ದು, ಅಶ್ವಿನಿ ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅವರ ಮಾವ ಕೂಡ ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ರಸ್ತೆ ಕಾಮಗಾರಿಯಲ್ಲಿನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ತಪ್ಪಿತಸ್ಥ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತರಿಗೆ ಗರಿಷ್ಠ ಮತ್ತು ನ್ಯಾಯಯುತ ಪರಿಹಾರ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಅರ್ಜಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗ, ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಉಳ್ಳಾಲ ತಾಲೂಕು ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯ ಪರಿಣಾಮವೇ ಭೂಕುಸಿತಕ್ಕೆ ಕಾರಣವಾಗಿದೆಯೇ ಎಂಬುದರ ಕುರಿತು ಸ್ವತಂತ್ರ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಲಾಗಿದೆ. ಅಲ್ಲದೆ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳು, ವಿಶೇಷವಾಗಿ IRC:SP:20-2002 ಹಾಗೂ IRC:SP:48 (Hill Road Manual) ಸೇರಿದಂತೆ ಅನ್ವಯಿಸುವ ತಾಂತ್ರಿಕ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸ್ವತಂತ್ರ ಇಂಜಿನಿಯರ್‌ಗಳು ಮತ್ತು ಭೂತಾಂತ್ರಿಕ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಮನವಿ ಮಾಡಲಾಗಿದೆ.
ಭೂಕುಸಿತದಿಂದ ಮೃತಪಟ್ಟವರ ಕುಟುಂಬಗಳು, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು ಹಾಗೂ ಆಸ್ತಿ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಗರಿಷ್ಠ, ಸಮರ್ಪಕ ಮತ್ತು ನ್ಯಾಯಯುತ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಜೊತೆಗೆ ನಿರ್ಲಕ್ಷ್ಯದಿಂದ ರಸ್ತೆ ಕಾಮಗಾರಿ ಜಾರಿಗೊಳಿಸಿದ ಇಂಜಿನಿಯರ್‌ಗಳು, ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಇತರ ಹೊಣೆಗಾರರ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ನಿರ್ದೇಶನವನ್ನು ಕೋರಲಾಗಿದೆ.
ಅರ್ಜಿದಾರರ ಪರ ವಕೀಲೆ ಅಕ್ಷತಾ ಶೆಟ್ಟಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸದೆ, ಅಧೀನ ಅಧಿಕಾರಿಗಳು ಸಲ್ಲಿಸಿದ ವರದಿಗಳನ್ನು ಆಧರಿಸಿ ಕ್ರಮ ಕೈಗೊಂಡಿರುವುದು ಗಂಭೀರ ಆಡಳಿತಾತ್ಮಕ ವೈಫಲ್ಯವಾಗಿದೆ ಎಂದು ನ್ಯಾಯಾಲಯದ ಗಮನ ಸೆಳೆದರು. ಸ್ಥಳ ಪರಿಶೀಲನೆ ನಡೆಸದೇ ವರದಿಗಳನ್ನು ಅಂಗೀಕರಿಸಿದ ಮೇಲಧಿಕಾರಿಗಳ ಹೊಣೆಗಾರಿಕೆಯನ್ನೂ ನ್ಯಾಯಾಲಯ ಪರಿಶೀಲಿಸಬೇಕೆಂದು ಅವರು ವಾದಿಸಿದರು.
ಇದೇ ರೀತಿಯ ದುರಂತಗಳು ಮರುಕಳಿಸದಂತೆ ಇಳಿಜಾರು ಪ್ರದೇಶಗಳಲ್ಲಿ ವೈಜ್ಞಾನಿಕ ರೀತಿಯ Slope Stabilization, ಸಮರ್ಪಕ Drainage ವ್ಯವಸ್ಥೆ, ಅಗತ್ಯ Retaining Structures ನಿರ್ಮಾಣ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಕ್ಷಣ ಕೈಗೊಳ್ಳುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಹೈಕೋರ್ಟ್ ನೀಡಿರುವ ತುರ್ತು ನೋಟಿಸ್‌ನೊಂದಿಗೆ ಈ ಪ್ರಕರಣವು ಸಾರ್ವಜನಿಕ ಸುರಕ್ಷತೆ, ರಸ್ತೆ ನಿರ್ಮಾಣದ ಗುಣಮಟ್ಟ, ಆಡಳಿತದ ಹೊಣೆಗಾರಿಕೆ ಹಾಗೂ ದುರಂತಗಳ ನಿರ್ವಹಣೆ ಕುರಿತು ಮಹತ್ವದ ಕಾನೂನು ಪರೀಕ್ಷೆಯಾಗಿ ಪರಿಣಮಿಸಿದ್ದು, ಸರ್ಕಾರದ ಮುಂದಿನ ಕ್ರಮಗಳತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.