Site icon Ullalavani

ಖಾಸಗಿ ಬಸ್ ನೌಕರರ ಗೌರವಕ್ಕೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ – ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ

ಇತ್ತೀಚೆಗೆ ಖಾಸಗಿ ಬಸ್‌ಗಳಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಇರ್ಫಾನ್ ಎಂಬಾತ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸಭ್ಯವಾಗಿ ವರ್ತಿಸಿದ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಘಟನೆ ನಡೆದ ಸಂದರ್ಭದಲ್ಲಿ ಅವರು ಖಾಸಗಿ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲದೆ, ಅವರು ಖಾಯಂ ಒಂದೇ ಖಾಸಗಿ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದವರೂ ಅಲ್ಲ. ಈ ಘಟನೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ನಡೆದಿರುವುದಲ್ಲ ಎಂಬುದು ಸ್ಪಷ್ಟವಾಗಿದೆ.

ಆದಾಗ್ಯೂ, ಕೃತ್ಯ ಯಾರೇ ಮಾಡಿದ್ದರೂ ಅಂತಹ ಅಸಭ್ಯ ಹಾಗೂ ಸಮಾಜ ವಿರೋಧಿ ವರ್ತನೆಯನ್ನು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ, ಮಂಗಳೂರು ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕರ ಸುರಕ್ಷತೆ, ಮಹಿಳೆಯರ ಗೌರವ ಮತ್ತು ಪ್ರಯಾಣಿಕರ ವಿಶ್ವಾಸಕ್ಕೆ ಧಕ್ಕೆ ತರುವ ಯಾವುದೇ ಕೃತ್ಯಕ್ಕೆ ನಮ್ಮ ಸಂಘದಲ್ಲಿ ಯಾವುದೇ ರೀತಿಯ ಬೆಂಬಲವಿಲ್ಲ.

ಒಬ್ಬ ವ್ಯಕ್ತಿಯ ವೈಯಕ್ತಿಕ ಕೃತ್ಯವನ್ನು ಇಡೀ ಖಾಸಗಿ ಬಸ್ ವಲಯಕ್ಕೆ ಸಂಬಂಧಿಸಿದಂತೆ ಬಿಂಬಿಸುವುದು ಸರಿಯಲ್ಲ. ಈ ಘಟನೆಯ ಹಿನ್ನೆಲೆಯಲ್ಲಿ ಕೆಲವು ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧವಿಲ್ಲದ ಖಾಸಗಿ ಬಸ್ಸುಗಳ ಚಿತ್ರಗಳನ್ನು ಬಳಸುತ್ತಿರುವುದು ವಿಷಾದನೀಯ. ಇದರಿಂದ ಪ್ರಾಮಾಣಿಕವಾಗಿ ಹಾಗೂ ಸ್ವಾಭಿಮಾನದಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು ಹಾಗೂ ಇತರ ನೌಕರರ ಗೌರವಕ್ಕೆ ಧಕ್ಕೆಯಾಗುತ್ತಿದೆ. ಮಾಧ್ಯಮಗಳು ಪರಿಶೀಲಿತ ಮಾಹಿತಿ ಮತ್ತು ಸಂಬಂಧಿತ ಚಿತ್ರಗಳನ್ನು ಮಾತ್ರ ಬಳಸುವಂತೆ ವಿನಂತಿಸುತ್ತೇವೆ.

ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ತಮ್ಮ ಉದ್ಯೋಗ, ಶಿಕ್ಷಣ, ಚಿಕಿತ್ಸೆ ಹಾಗೂ ಇತರ ಅಗತ್ಯಗಳಿಗಾಗಿ ಖಾಸಗಿ ಬಸ್ ಸೇವೆಯನ್ನು ಅವಲಂಬಿಸಿದ್ದಾರೆ. ಅವರ ಸುರಕ್ಷತೆ, ಗೌರವ ಮತ್ತು ವಿಶ್ವಾಸವನ್ನು ಕಾಪಾಡುವುದು ಪ್ರತಿಯೊಬ್ಬ ಖಾಸಗಿ ಬಸ್ ನೌಕರನ ನೈತಿಕ ಮತ್ತು ವೃತ್ತಿಪರ ಜವಾಬ್ದಾರಿಯಾಗಿದೆ. ಆ ನಂಬಿಕೆಗೆ ಧಕ್ಕೆ ತರುವ ಯಾವುದೇ ವರ್ತನೆಯನ್ನು ಸಂಘ ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ.

ಮುಂದಿನ ದಿನಗಳಲ್ಲಿ ಖಾಸಗಿ ಬಸ್ ನೌಕರರು ಕರ್ತವ್ಯದ ವೇಳೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ, ಮಹಿಳೆಯರಿಗೆ ಕಿರುಕುಳ, ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಬಳಕೆ, ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ, ಯಾವುದೇ ನಿರ್ದಾಕ್ಷಿಣ್ಯವಿಲ್ಲದೆ ಸಂಬಂಧಿತ ಬಸ್ ಮಾಲೀಕರು, ಪೊಲೀಸ್ ಇಲಾಖೆ ಹಾಗೂ ಮಾನ್ಯ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ವತಿಯಿಂದ ಮನವಿ ಮಾಡಲಾಗುವುದು.

ಅದೇ ವೇಳೆ, ಖಾಸಗಿ ಬಸ್ ನೌಕರರೂ ತಮ್ಮ ವೃತ್ತಿಯ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ನೌಕರನ ಉತ್ತಮ ನಡವಳಿಕೆಯೇ ಇಡೀ ಖಾಸಗಿ ಬಸ್ ವಲಯದ ಗೌರವವನ್ನು ಹೆಚ್ಚಿಸುತ್ತದೆ ಎಂಬುದನ್ನು ಎಲ್ಲರೂ ಅರಿತು ಜವಾಬ್ದಾರಿಯಿಂದ ವರ್ತಿಸಬೇಕೆಂದು ಸಂಘ ಮನವಿ ಮಾಡುತ್ತದೆ.

ಸಾರ್ವಜನಿಕರ ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ. ಆ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಉಸ್ಮಾನ್ ಅಲ್ತಾಫ್
ಅಧ್ಯಕ್ಷರು
ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ, ಮಂಗಳೂರು

Exit mobile version