Site icon Ullalavani

ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿ ರೋಬೋಟಿಕ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ

ದೇರಳಕಟ್ಟೆ: ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ತಜ್ಞ ವೈದ್ಯರು ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್‌ನಿಂದ ಬಳಲುತ್ತಿದ್ದ 57 ವರ್ಷದ ರೋಗಿಗೆ ಅತ್ಯಾಧುನಿಕ ರೋಬೋಟಿಕ್ ವಿಪ್ಪಲ್  ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸುವ ಮೂಲಕ ಮತ್ತೊಂದು ಮಹತ್ವದ ವೈದ್ಯಕೀಯ ಸಾಧನೆ ಮಾಡಿದ್ದಾರೆ.

ಹೊಟ್ಟೆನೋವು, ಕಾಮಾಲೆ ಹಾಗೂ ತೂಕ ಇಳಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯು ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಸೊರಕೆ ಅವರು ಪರೀಕ್ಷಿಸಿದ ಬಳಿಕ ಸಿಟಿ ಸ್ಕ್ಯಾನ್, ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಹಾಗೂ ಬಯಾಪ್ಸಿ ಪರೀಕ್ಷೆಗಳನ್ನು ನಡೆಸಲಾಯಿತು. ಈ ಪರೀಕ್ಷೆಗಳಲ್ಲಿ ರೋಗಿಗೆ ಮುಂದುವರಿದ ಹಂತದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇರುವುದು ದೃಢಪಟ್ಟಿತು.

ಈ ರೀತಿಯ ಕ್ಯಾನ್ಸರ್ ಚಿಕಿತ್ಸೆಗೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಸಮನ್ವಯ ಅತ್ಯಗತ್ಯವಾಗಿದ್ದು, ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ, ಆಂಕಾಲಜಿ, ರೇಡಿಯಾಲಜಿ, ಪೆಥಾಲಜಿ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ರೋಗಿಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದರು. ಕ್ಯಾನ್ಸರ್ ಮುಂದುವರಿದ ಹಂತದಲ್ಲಿದ್ದ ಕಾರಣ, ಶಸ್ತ್ರಚಿಕಿತ್ಸೆಗೆ ಮುನ್ನ ಗಡ್ಡೆಯ ಗಾತ್ರವನ್ನು ಕಡಿಮೆಗೊಳಿಸಲು ಕೀಮೋಥೆರಪಿ ನೀಡಲು ನಿರ್ಧರಿಸಲಾಯಿತು.

ವೈದ್ಯಕೀಯ ಆಂಕಾಲಜಿಸ್ಟ್ ಡಾ. ವಿಜಿತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಾಲ್ಕು ಸುತ್ತಿನ ಕೀಮೋಥೆರಪಿ ನೀಡಲಾಯಿತು. ನಂತರ ನಡೆಸಿದ ಪಿಇಟಿ  ಸ್ಕ್ಯಾನ್ ಪರೀಕ್ಷೆಯಲ್ಲಿ ಗಡ್ಡೆಯ ಗಾತ್ರ ಗಮನಾರ್ಹವಾಗಿ ಕುಗ್ಗಿರುವುದು ಕಂಡುಬಂದಿದ್ದು, ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಅದಾದ ಬಳಿಕ ರೋಗಿಗೆ ವಿಪ್ಪಲ್ ಶಸ್ತ್ರಚಿಕಿತ್ಸೆ  ಮಾಡಲು ವೈದ್ಯರು ಸಲಹೆ ನೀಡಿದರು. ಇದು ಮೇದೋಜ್ಜೀರಕ ಗ್ರಂಥಿಯ ಒಂದು ಭಾಗ, ಸಣ್ಣ ಕರುಳು, ಪಿತ್ತನಾಳ ಹಾಗೂ ಹೊಟ್ಟೆಯ ಒಂದು ಭಾಗವನ್ನು ತೆಗೆದುಹಾಕಬೇಕಾಗುವ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಈ ಶಸ್ತ್ರಚಿಕಿತ್ಸೆಯನ್ನು ತೆರೆದ ವಿಧಾನದಲ್ಲಿ ನಡೆಸಲಾಗುತ್ತದೆ. ಇದಕ್ಕಾಗಿ ಹೊಟ್ಟೆಯ ಮೇಲೆ ದೊಡ್ಡ ಛೇದನ ಮಾಡಬೇಕಾಗುವುದರಿಂದ ಚೇತರಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ.

ಆದರೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಡಾ-ವಿಂಚಿ  ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆ ಬಳಸಿ ರೋಗಿಗೆ ರೋಬೋಟಿಕ್ ಸಹಾಯದೊಂದಿಗೆ ವಿಪ್ಪಲ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ವಿಧಾನದಲ್ಲಿ ಸಣ್ಣ ಛೇದನಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದ್ದು, ಹೆಚ್ಚು ನಿಖರತೆ, ಕಡಿಮೆ ರಕ್ತಸ್ರಾವ, ಕಡಿಮೆ ನೋವು ಹಾಗೂ ವೇಗವಾದ ಚೇತರಿಕೆ ಪ್ರಮುಖ ಪ್ರಯೋಜನಗಳಾಗಿವೆ. ರೋಗಿ ಹಾಗೂ ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ ಬಳಿಕ ಅವರ ಒಪ್ಪಿಗೆ ಪಡೆದು ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. ಶಸ್ತ್ರಚಿಕಿತ್ಸೆಯನ್ನು ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ಹಾಗೂ ಆಂಕೋಸರ್ಜರಿ ವಿಭಾಗದ ಡಾ. ಸಂತೋಷ್ ಕುಮಾರ್ ಕೆ. ವೈ. ಮತ್ತು ಡಾ. ಪ್ರವೀಣ್ ಕುಮಾರ್ ಆರ್. ಭಟ್ ನೇತೃತ್ವದಲ್ಲಿ ನುರಿತ ನರ್ಸ್‌ಗಳು ಹಾಗೂ ಸಹಾಯಕ ಸಿಬ್ಬಂದಿ ತಂಡ ಯಶಸ್ವಿಯಾಗಿ ನೆರವೇರಿಸಿತು. ಸುಮಾರು ಒಂಬತ್ತು ಗಂಟೆಗಳ ಕಾಲ ನಡೆದ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಕಡಿಮೆ ರಕ್ತಸ್ರಾವವಾಗಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಇಂತಹ ಶಸ್ತ್ರಚಿಕಿತ್ಸೆಗಳಲ್ಲಿ ಅರಿವಳಿಕೆ ನೀಡುವುದು ಅತ್ಯಂತ ಸವಾಲಿನ ಕಾರ್ಯವಾಗಿದ್ದು, ಅರಿವಳಿಕೆ ಮತ್ತು ತೀವ್ರ ನಿಗಾ ವಿಭಾಗದ ಮುಖ್ಯಸ್ಥ ಡಾ. ಅವಿನಾಶ್ ಭಂಡಾರಿ, ಡಾ. ಗೋವಿಂದರಾಜ್ ಭಟ್, ಡಾ. ಜಾಯ್ಲೀನ್ ಡಿ’ಸೋಜಾ ಹಾಗೂ ಡಾ. ರಂಜನ್ ನಾಯಕ್ ಅವರ ತಂಡ ಯಶಸ್ವಿಯಾಗಿ ನಿರ್ವಹಿಸಿತು.

ಉತ್ತಮ ವೈದ್ಯಕೀಯ ಹಾಗೂ ಶುಶ್ರೂಷಾ ಸೇವೆಯ ಫಲವಾಗಿ ರೋಗಿಯು ಶೀಘ್ರ ಚೇತರಿಸಿಕೊಂಡು ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಶಸ್ತ್ರಚಿಕಿತ್ಸೆಯಾಗಿ ಒಂದು ತಿಂಗಳು ಕಳೆದಿದ್ದು, ರೋಗಿಯ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಶಸ್ತ್ರಚಿಕಿತ್ಸೆಯ ನಂತರದ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಈ ಕುರಿತು ಮಾತನಾಡಿದ ಡಾ. ಸಂತೋಷ್ ಕುಮಾರ್ ಅವರು, “ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರಿಗೆ ಅತ್ಯಂತ ಸ್ಪಷ್ಟ ಹಾಗೂ ವಿಸ್ತೃತ ದೃಶ್ಯಾವಳಿ ದೊರೆಯುತ್ತದೆ. ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ರಕ್ತಸ್ರಾವ ಕಡಿಮೆಯಾಗುವುದರೊಂದಿಗೆ ರೋಗಿಯ ಚೇತರಿಕೆಯೂ ವೇಗವಾಗುತ್ತದೆ,” ಎಂದು ತಿಳಿಸಿದರು.

“ರೋಬೋಟ್ ಸ್ವತಃ ಶಸ್ತ್ರಚಿಕಿತ್ಸೆ ನಡೆಸುತ್ತದೆ ಎಂಬುದು ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆಯಾಗಿದೆ. ವಾಸ್ತವವಾಗಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ವೈದ್ಯರೇ ರೋಬೋಟಿಕ್ ಉಪಕರಣಗಳನ್ನು ನಿಯಂತ್ರಿಸುವ ಮೂಲಕ ನಡೆಸುತ್ತಾರೆ. ರೋಬೋಟ್ ವೈದ್ಯರ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ತಾಂತ್ರಿಕ ಸಾಧನ ಮಾತ್ರ,” ಎಂದು ಅವರು ವಿವರಿಸಿದರು.

ಆಸ್ಪತ್ರೆಯ ವಿವಿಧ ಶಸ್ತ್ರಚಿಕಿತ್ಸಾ ವಿಭಾಗಗಳು ಇದುವರೆಗೆ 200ಕ್ಕೂ ಹೆಚ್ಚು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅನೇಕ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸಿವೆ ಎಂದು ಅವರು ತಿಳಿಸಿದರು. ಈ ರೋಗಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ನಿಟ್ಟೆ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಹಕಾರ ಮತ್ತು ಪ್ರೋತ್ಸಾಹದಿಂದ ಈ ದುಬಾರಿ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಕೆ. ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಸಂದೀಪ್ ರೈ ಹಾಗೂ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ ಅವರು ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸಿದರು.

 

Exit mobile version