ಮಂಗಳೂರು: ಗ್ರಾಮ ಪಂಚಾಯತ್‌ಗಳಲ್ಲಿ ಹೆಚ್ಚುತ್ತಿರುವ ಹಸಿ ಕಸದ ಸಮಸ್ಯೆಗೆ ಶಾಶ್ವತ ಹಾಗೂ ಪರಿಸರ ಸ್ನೇಹಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)–ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಸಿರು ದಳ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬಲ್ಮಠದ ಸಹೋದಯ ಸಭಾಭವನದಲ್ಲಿ ಸಾವಯವ ಗೊಬ್ಬರ ತಯಾರಿ ತರಬೇತಿ ಕಾರ್ಯಕ್ರಮ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಮಾತನಾಡಿ, ಹಸಿ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ವೈಜ್ಞಾನಿಕವಾಗಿ ನಿರ್ವಹಿಸುವ ಮೂಲಕ ಸ್ವಚ್ಛ ಹಾಗೂ ಸುಸ್ಥಿರ ಗ್ರಾಮಗಳನ್ನು ನಿರ್ಮಿಸಬಹುದೆಂದು ತಿಳಿಸಿದರು.
ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ದಾಮೋದರ್ ಹಾಗೂ ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರಮೀಝ್ ಬಾನು ಗ್ರಾಮ ಮಟ್ಟದಲ್ಲಿ ಹಸಿ ಕಸ ನಿರ್ವಹಣೆಯಲ್ಲಿ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅಗತ್ಯವೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ನೂಜಿಪ್ಪಾಡಿ ಹಾಗೂ ಅಶ್ವಿನಿ ಕೆ. ಭಟ್ ಅವರು ಎರೆಹುಳ ಗೊಬ್ಬರ, ಬಿನ್ ಕಾಂಪೋಸ್ಟಿಂಗ್, ಮನೆಯಲ್ಲಿಯೇ ಸಾವಯವ ಗೊಬ್ಬರ ತಯಾರಿಕೆ, ಟೆರಸ್ ಗಾರ್ಡನಿಂಗ್ ಹಾಗೂ ಹಸಿ ಕಸದ ವೈಜ್ಞಾನಿಕ ನಿರ್ವಹಣೆ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಹಸಿರು ದಳ ಕಾರ್ಯನಿರ್ವಹಿಸುತ್ತಿರುವ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಹಸಿ ಕಸದಿಂದ ತಯಾರಿಸಲಾದ ಸಂಪೂರ್ಣ ಸಾವಯವ ಗೊಬ್ಬರ ‘ಗ್ರೀನ್ ಗೋಲ್ಡ್’ ಅನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಅವರು ಲೋಕಾರ್ಪಣೆ ಮಾಡಿದರು. ಉತ್ತಮ ಗುಣಮಟ್ಟದ ಈ ಸಾವಯವ ಗೊಬ್ಬರವು ರೈತರಿಗೆ ಹಾಗೂ ತೋಟಗಾರಿಕೆಯಲ್ಲಿ ತೊಡಗಿರುವವರಿಗೆ ಕಡಿಮೆ ದರದಲ್ಲಿ ಲಭ್ಯವಾಗಲಿದ್ದು, ಹಸಿ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ತಿಳಿಸಲಾಯಿತು.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಜಿಲ್ಲಾ ಸಂಯೋಜಕ ನವೀನ್ ಹಾಗೂ ಘನತ್ಯಾಜ್ಯ ನಿರ್ವಹಣೆ ಜಿಲ್ಲಾ ಸಂಯೋಜಕ ಪವನ್ ಭಾಗವಹಿಸಿ ಗ್ರಾಮ ಪಂಚಾಯತ್‌ಗಳಲ್ಲಿ ಹಸಿ ಕಸ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು, ಸ್ವಸಹಾಯ ಸಂಘಗಳ ಸದಸ್ಯರು, ಪರಿಸರ ಆಸಕ್ತರು ಹಾಗೂ ಬಳ್ಳಾರಿ ಜಿಲ್ಲೆಯಿಂದ ಆಗಮಿಸಿದ ಅಧಿಕಾರಿಗಳು ಸೇರಿದಂತೆ ಒಟ್ಟು 107 ಮಂದಿ ತರಬೇತಿಯಲ್ಲಿ ಪಾಲ್ಗೊಂಡರು.
ಹಸಿರು ದಳದ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಸ್ವಾಗತಿಸಿದರು. ವ್ಯವಸ್ಥಾಪಕ ನಾಗರಾಜ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಗಿಡಗಳನ್ನು ನೀಡಿ ಗೌರವಿಸಲಾಯಿತು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಸಂದೇಶದೊಂದಿಗೆ ಬಟ್ಟೆಯ ಚೀಲಗಳನ್ನು ಹಾಗೂ ಭಾಗವಹಿಸಿದ ಎಲ್ಲರಿಗೂ ನುಗ್ಗೆ ಗಿಡ, ಮಲ್ಲಿಗೆ ಗಿಡ ಮತ್ತು ವಿವಿಧ ತರಕಾರಿ ಬೀಜಗಳನ್ನು ವಿತರಿಸಲಾಯಿತು.