Site icon Ullalavani

ಪುತ್ತೂರು: ಕೋಮು ಪ್ರಚೋದನೆ ಆರೋಪ- 7 ವೆಬ್ ನ್ಯೂಸ್, ಸಾಮಾಜಿಕ ಜಾಲತಾಣಗಳ ವಿರುದ್ಧ ಪ್ರಕರಣ ದಾಖಲು

ಪುತ್ತೂರು, ಜು. 10: ಪುರುಷರಕಟ್ಟೆಯಲ್ಲಿ ನಡೆದ ಇತ್ತೀಚಿನ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದ ಆರೋಪದ ಮೇಲೆ, ಪುತ್ತೂರು ನಗರ ಪೊಲೀಸರು ಏಳು ವೆಬ್ ನ್ಯೂಸ್ ಪೋರ್ಟಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪುತ್ತೂರು ಪುರುಷರಕಟ್ಟೆಯಲ್ಲಿ ಘಟನೆಯೊಂದು ನಡೆದಿತ್ತು. ಈ ಘಟನೆಯನ್ನು ವಾಸ್ತವಿಕವಾಗಿ ವರದಿ ಮಾಡುವ ಬದಲು, ಆರೋಪಿತ ಮಾಧ್ಯಮಗಳು ಕೋಮು ಬಣ್ಣ ಬಳಿದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ವಿಭಜನೆ ಉಂಟುಮಾಡುವ ಪ್ರಯತ್ನ ಮಾಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋಮು ಸೌಹಾರ್ದತೆಯನ್ನು ಕದಡಲು ಈ ವೇದಿಕೆಗಳು ಸುಳ್ಳು ಮಾಹಿತಿಯನ್ನು ಹರಡುತ್ತಿವೆ ಎಂದು ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 353(2) ಅಡಿಯಲ್ಲಿ ಪುತ್ತೂರು ಚಾವಡಿ (Instagram), ಹೊಸ ದಿಗಂತ, Zoomintv. online, News focuskannada. com, ಉದಯವಾಣಿ, Prakharanews. com ಮತ್ತು ಕರ್ನಾಟಕ ಪೋರ್ಟ್‌ಫೋಲಿಯೊ (Twitter/X) ವಿರುದ್ಧ ಪ್ರಕರಣ ದಾಖಲಾಗಿದೆ.ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಹಾಗೂ ಕೋಮು ಪ್ರಚೋದನಾತ್ಮಕ ಸಂದೇಶಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Exit mobile version