ಆಸ್ಟ್ರೇಲಿಯಾ, ಜು. 09: ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಮೂರು ದಿನಗಳ ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಲ್ಲಿನ ಭಾರತೀಯ ಸಮುದಾಯವು ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭವ್ಯ ಸ್ವಾಗತದ ಮೂಲಕ ಆತ್ಮೀಯ ಬರಮಾಡಿಕೊಳ್ಳುವಿಕೆ ನೀಡಿತು.
ಮೆಲ್ಬೋರ್ನ್‌ನಲ್ಲಿ ನೆರೆದಿದ್ದ ನೂರಾರು ಅನಿವಾಸಿ ಭಾರತೀಯರು ಭಾರತದ ತ್ರಿವರ್ಣ ಧ್ವಜಗಳನ್ನು ಹಾರಿಸಿ, ಸಂಭ್ರಮದಿಂದ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ‘ಆಸ್ಟ್ರೇಲಿಯನ್ ಇಂಡಿಯನ್ ಆರ್ಕೆಸ್ಟ್ರಾ’ ತಂಡವು ದೇಶಭಕ್ತಿ ಗೀತೆ ‘ವಂದೇ ಮಾತರಂ’ಅನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದ್ದು, ಅಲ್ಲಿದ್ದವರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ಜನರು ‘ಭಾರತ್ ಮಾತಾ ಕೀ ಜೈ’, ‘ಮೋದಿ, ಮೋದಿ’ಎಂಬ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ಸಾಂಸ್ಕೃತಿಕ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಸ್ವಾಗತ ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿದವು. ಪ್ರಧಾನಿ ಮೋದಿಯವರ ಈ ಮೂರು ದಿನಗಳ ಆಸ್ಟ್ರೇಲಿಯಾ ಭೇಟಿಯ ವೇಳೆ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ, ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ತಂತ್ರಜ್ಞಾನ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದ ಸಹಭಾಗಿತ್ವ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಉನ್ನತ ಮಟ್ಟದ ಮಾತುಕತೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.