Site icon Ullalavani

ಕೇವಲ ನಟನಲ್ಲ, ನಿಜ ಜೀವನದ ಹೀರೋ ರಿಷಬ್ ಶೆಟ್ಟಿ – ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಫೌಂಡೇಷನ್!

ಬೆಂಗಳೂರು, ಜು. 09 : ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ತಮ್ಮದೇ ಆದ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ, ಇದೀಗ ಸಾಮಾಜಿಕ ಸೇವೆಯ ಮೂಲಕವೂ ಜನಮನ ಗೆಲ್ಲುತ್ತಿದ್ದಾರೆ. ‘ಕಾಂತಾರ’ ಸಿನಿಮಾದ ಮೂಲಕ ಕರಾವಳಿಯ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ ರಿಷಬ್, ತಮ್ಮ ‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಫೌಂಡೇಷನ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಆರ್ಥಿಕ ಸಂಕಷ್ಟದಲ್ಲಿದ್ದ ಹಲವು ವಿದ್ಯಾರ್ಥಿಗಳ ಬದುಕಿಗೆ ನೆರವಾದ ನೈಜ ಕಥೆಗಳು ಗಮನ ಸೆಳೆಯುತ್ತಿವೆ. ಕಷ್ಟದ ಜೀವನವನ್ನು ಅನುಭವಿಸಿ ಬೆಳೆದಿರುವ ರಿಷಬ್ ಶೆಟ್ಟಿ, ಅದೇ ಅನುಭವವನ್ನು ಸಮಾಜ ಸೇವೆಯಾಗಿ ರೂಪಿಸಿರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಮೂಲಕ ಸರ್ಕಾರಿ ಶಾಲೆಗಳ ಮಹತ್ವ ಸಾರಿದ್ದ ರಿಷಬ್ ಶೆಟ್ಟಿ, ನೈಜ ಬದುಕಿನಲ್ಲೂ ಅದನ್ನೇ ಕಾರ್ಯರೂಪಕ್ಕೆ ತಂದಿದ್ದಾರೆ. ತಾವು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾದರಿಯಾಗಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ಫೌಂಡೇಷನ್ ಮೂಲಕ ನೆರವು ನೀಡಲಾಗುತ್ತಿದೆ.ಆರ್ಥಿಕ ಸಂಕಷ್ಟದಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳಿಗೆ ರಿಷಬ್ ಶೆಟ್ಟಿ ಫೌಂಡೇಷನ್ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ನೀಡುತ್ತಿದೆ. ಕೂಲಿ ಕಾರ್ಮಿಕರು, ರೈತರು ಹಾಗೂ ದಿನಗೂಲಿ ಕುಟುಂಬಗಳ ಮಕ್ಕಳಿಗೆ ಈ ನೆರವು ಹೊಸ ಭರವಸೆಯಾಗಿದೆ. ಫೌಂಡೇಷನ್‌ನಿಂದ ನೆರವು ಪಡೆದ ವಿದ್ಯಾರ್ಥಿಯೊಬ್ಬ, “ತಂದೆಯವರ ನಿಧನದ ಬಳಿಕ ನನ್ನ ಓದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ರಿಷಬ್ ಸರ್ ನೀಡಿದ ಸ್ಕಾಲರ್‌ಶಿಪ್‌ನಿಂದಲೇ ನನ್ನ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು” ಎಂದು ಭಾವುಕರಾಗಿ ಹೇಳಿಕೊಂಡಿದ್ದಾನೆ.ಸಿನಿಮಾದ ಯಶಸ್ಸಿನ ಜೊತೆಗೆ ಸಮಾಜಕ್ಕೆ ಮರಳಿ ಕೊಡುವ ಮನೋಭಾವವನ್ನು ಪ್ರದರ್ಶಿಸಿರುವ ರಿಷಬ್ ಶೆಟ್ಟಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಳಿಕೆಯನ್ನು ಸಮಾಜದ ಒಳಿತಿಗೆ ಬಳಸುತ್ತಿರುವ ಅವರ ಮಾನವೀಯ ನಡೆಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Exit mobile version