ಮಂಗಳೂರು, ಜು. 09 : ನಗರದ ಪಣಂಬೂರು ಅಂತಾರಾಷ್ಟ್ರೀಯ ಬೀಚ್‌ನಲ್ಲಿ ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿ ಹಾಗೂ ಹೆಚ್ಚಿದ ಕಡಲಬ್ಬರದ ಪರಿಣಾಮ ಅಲ್ಪ ಪ್ರಮಾಣದ ಕಡಲು ಕೊರೆತ ಕಾಣಿಸಿಕೊಂಡಿದ್ದು, ಬೀಚ್‌ನ ಕೆಲವು ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೀಚ್‌ನ ಪ್ರಮುಖ ತಡೆಗೋಡೆ, ಕಚೇರಿ ಹಾಗೂ ಟಿಕೆಟ್ ಕೌಂಟರ್ ಸಮೀಪದ ಪ್ರದೇಶದಲ್ಲಿ ಕಡಲು ಕೊರೆತ ಉಂಟಾಗಿದ್ದು, ಪರಿಣಾಮವಾಗಿ ಎರಡು ಮರಗಳು ಧರೆಗುರುಳಿವೆ. ಕೋಸ್ಟ್ ಗಾರ್ಡ್ ಕಚೇರಿ ಸಮೀಪ ಮತ್ತಷ್ಟು ಕೊರೆತವಾಗದಂತೆ ತಾತ್ಕಾಲಿಕ ಮುನ್ನೆಚ್ಚರಿಕೆ ಕ್ರಮವಾಗಿ ಬೃಹತ್ ಕಲ್ಲುಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಿದ್ದರೂ, ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಕಡಲಬ್ಬರ ತೀವ್ರಗೊಂಡಿದೆ. ಇದೇ ಕಾರಣಕ್ಕೆ ಬೀಚ್‌ನ ಕೆಲವು ಭಾಗಗಳಲ್ಲಿ ಮರಳು ಸವೆತ ಹೆಚ್ಚಾಗಿ ಕಡಲು ಕೊರೆತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಣಂಬೂರು ಬೀಚ್‌ನ ಬಹುತೇಕ ಭಾಗದಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿದ್ದರೂ, ತಡೆಗೋಡೆ ಇಲ್ಲದ ಪ್ರದೇಶಗಳಲ್ಲಿ ಕಡಲಬ್ಬರದ ಹೊಡೆತಕ್ಕೆ ಮರಳು ಸವೆದು ಬೀಚ್‌ನ ಸ್ವರೂಪದಲ್ಲೇ ಬದಲಾವಣೆ ಕಾಣಿಸುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಸಿಗರು ಸಮುದ್ರಕ್ಕಿಳಿಯುವುದಕ್ಕೆ ನಿಷೇಧ ಹೇರಲಾಗಿದೆ. ಮುಂದಿನ ದಿನಗಳಲ್ಲಿಯೂ ಕಡಲಬ್ಬರ ಇದೇ ರೀತಿ ಮುಂದುವರಿದರೆ ಮತ್ತಷ್ಟು ಪ್ರದೇಶಗಳು ಕಡಲು ಕೊರೆತಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಪ್ರವಾಸಿಗರ ಸುರಕ್ಷತೆ ಹಾಗೂ ಬೀಚ್ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.