ಮುಂಬೈ, ಜು. 9: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ರಾಯಗಡ ಜಿಲ್ಲೆಯ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್ಪಿಜಿ ಬಾಟಲಿಂಗ್ ಘಟಕದಲ್ಲಿ ಅಪರೂಪದ ಘಟನೆ ಸಂಭವಿಸಿದೆ. ಪ್ರವಾಹದ ನೀರು ಘಟಕಕ್ಕೆ ನುಗ್ಗಿದ ಪರಿಣಾಮ ಸುಮಾರು 3,000 ಎಲ್ಪಿಜಿ ಸಿಲಿಂಡರ್‌ಗಳು ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ.
ಪನ್ವೆಲ್ ತಾಲೂಕಿನ ಚವಾಣೆ ಗ್ರಾಮದ ಹೆಚ್ಚುವರಿ ಎಂಐಡಿಸಿ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಪಾತಾಳಗಂಗಾ ಎಲ್ಪಿಜಿ ಬಾಟಲಿಂಗ್ ಘಟಕದ ರಕ್ಷಣಾ ಗೋಡೆ ಕುಸಿದ ಪರಿಣಾಮ ಪ್ರವಾಹದ ನೀರು ಒಳನುಗ್ಗಿ, ಭರ್ತಿ ಹಾಗೂ ಖಾಲಿ ಸಿಲಿಂಡರ್‌ಗಳನ್ನು ಹೊತ್ತೊಯ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನದಿಯಲ್ಲಿ ತೇಲುತ್ತಿರುವ ಸಿಲಿಂಡರ್‌ಗಳ ವಿಡಿಯೊಗಳು ವ್ಯಾಪಕವಾಗಿ ವೈರಲ್ ಆಗಿವೆ.
ರಾಯಗಡ ಜಿಲ್ಲಾಧಿಕಾರಿ ಕಿಶನ್ ಜವಾಲೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ನದಿಯಲ್ಲಿ ತೇಲುತ್ತಿರುವ ಅಥವಾ ದಡಕ್ಕೆ ಬಂದಿರುವ ಯಾವುದೇ ಸಿಲಿಂಡರ್‌ಗಳನ್ನು ಮುಟ್ಟಬಾರದು, ಮನೆಗೆ ತೆಗೆದುಕೊಂಡು ಹೋಗಬಾರದು ಹಾಗೂ ಬಳಸಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದ್ದಾರೆ. ಕೆಲವು ಸಿಲಿಂಡರ್‌ಗಳಲ್ಲಿ ಅನಿಲ ಇರುವ ಸಾಧ್ಯತೆ ಇರುವುದರಿಂದ ಅವು ಅಪಾಯಕಾರಿಯಾಗಿರಬಹುದು ಎಂದು ಅವರು ತಿಳಿಸಿದ್ದಾರೆ. ಸಿಲಿಂಡರ್‌ಗಳು ಕಂಡುಬಂದರೆ ಕೂಡಲೇ ಸ್ಥಳೀಯ ಆಡಳಿತ ಅಥವಾ ಎಚ್‌ಪಿಸಿಎಲ್ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.