Site icon Ullalavani

ಚೆನ್ನೈ : ಅಣ್ಣಾಮಲೈ ಹೊಸ ಚಳುವಳಿಗೆ ಭಾರೀ ಸ್ಪಂದನೆ; 14 ಲಕ್ಷಕ್ಕೂ ಹೆಚ್ಚು ಜನರ ಸೈನ್‌ಅಪ್

ಚೆನ್ನೈ : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ K. ಅಣ್ಣಾಮಲೈ ಘೋಷಿಸಿರುವ ಹೊಸ ಜನಚಳುವಳಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. “ಇದು ನಮ್ಮ ಇಯಕ್ಕಂ” (This is Our Movement) ಎಂಬ ಹೆಸರಿನ ಚಳುವಳಿಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್ ಮೂಲಕ ಸೈನ್‌ಅಪ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಹೊಸ ರಾಜಕೀಯ ಮತ್ತು ಸಾಮಾಜಿಕ ಪರ್ಯಾಯವನ್ನು ರೂಪಿಸುವ ಉದ್ದೇಶದಿಂದ ಚಳುವಳಿಯನ್ನು ಆರಂಭಿಸಿರುವ ಅಣ್ಣಾಮಲೈ, ಶಿಕ್ಷಣ, ಆರೋಗ್ಯ, ಸುಸ್ಥಿರ ಅಭಿವೃದ್ಧಿ ಹಾಗೂ ಯುವ ನಾಯಕತ್ವ ಎಂಬ ನಾಲ್ಕು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ತಮ್ಮೊಂದಿಗೆ ವೃತ್ತಿಪರರು, ತಂತ್ರಜ್ಞಾನ ಕ್ಷೇತ್ರದ ತಜ್ಞರು ಹಾಗೂ ಸಾಮಾನ್ಯ ನಾಗರಿಕರು ಕೈಜೋಡಿಸಬೇಕು ಎಂದು ಕರೆ ನೀಡಿರುವ ಅವರು, ಆಡಳಿತ ಮತ್ತು ನೀತಿ ನಿರ್ಧಾರಗಳಲ್ಲಿ ಜನರ ನೇರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಚಳವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ರಾಜೀನಾಮೆ ಪರ್ವ

ಅಣ್ಣಾಮಲೈ ಅವರ ಹೊಸ ಚಳುವಳಿಗೆ ಭಾರೀ ಸ್ಪಂದನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತಮಿಳುನಾಡು ಬಿಜೆಪಿಯಲ್ಲಿ ರಾಜೀನಾಮೆಗಳ ಸರಣಿ ಆರಂಭವಾಗಿದೆ. ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಹಾಗೂ ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆಗಳತ್ತ ಎಲ್ಲರ ಗಮನ ಸೆಳೆದಿದೆ.

Exit mobile version