ಕೊಲ್ಕತ್ತಾ, ಜು. 08 ; ಪಶ್ಚಿಮ ಬಂಗಾಳದ ಬರುಯಿಪುರ್ ನಲ್ಲಿ 12 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯೋರ್ವ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಆರೋಪಿ ಪ್ರಬಾಶ್ ಮಂಡಲ್ ನನ್ನು ಸ್ಥಳಮಜರು ನಡೆಸಲು ಘಟನಾ ಸ್ಥಳಕ್ಕೆ ಕರೆದೊಯ್ಯುವಾಗ ಪೊಲೀಸ್ ವಶದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಜೊತೆಗ ಆತ ಆತ ಪೊಲೀಸ್ ಸಿಬ್ಬಂದಿಯೊಬ್ಬರ ಬಂದೂಕನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ. ಹಾಗೂ ಆರೋಪಿಯು ಪರಾರಿಯಾಗುವ ವೇಳೆ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಆರೋಪಿ ಪ್ರಬಾಶ್ ಮಂಡಲ್ 12 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಅಪರಾಧ ನಡೆಯುವ ಮುನ್ನ ಬಾಲಕಿಯೊಂದಿಗೆ ಆರೋಪಿಯು ಕಾಣಿಸಿಕೊಂಡಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.