Site icon Ullalavani

ರದ್ದಾದ ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದ ಸಿಹಿಸುದ್ದಿ: ಮರು ಸಕ್ರಿಯಗೊಳಿಸಲು ಅವಕಾಶ

ಬೆಂಗಳೂರು, ಜು. 8: ವಿವಿಧ ಕಾರಣಗಳಿಂದ ರದ್ದಾಗಿ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಗೊಂಡಿದ್ದ ಅರ್ಹ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿಗಳನ್ನು ಮತ್ತೆ ಪಡೆಯಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅನ್ನಭಾಗ್ಯ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಮರು ಸಕ್ರಿಯಗೊಳಿಸಲು ಸರ್ಕಾರ ಈ ಹಿಂದೆ ನಿಗದಿಪಡಿಸಿದ್ದ 45 ದಿನಗಳ ಕಾಲಮಿತಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ಇದರಿಂದ ಅರ್ಹ ಫಲಾನುಭವಿಗಳು ಇನ್ನು ಮುಂದೆ ಯಾವುದೇ ಗಡುವಿನ ಆತಂಕವಿಲ್ಲದೆ ತಮ್ಮ ವ್ಯಾಪ್ತಿಯ ತಹಶೀಲ್ದಾರ್ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಬಿಪಿಎಲ್ ಕಾರ್ಡ್‌ಗಳನ್ನು ಮರು ಸಕ್ರಿಯಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ಈ ಕ್ರಮದಿಂದ ನಿಜವಾದ ಅರ್ಹ ಕುಟುಂಬಗಳಿಗೆ ಆಹಾರ ಭದ್ರತಾ ಯೋಜನೆಗಳು ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಮತ್ತೆ ದೊರೆಯಲಿದ್ದು, ಅರ್ಹರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಹಾರ ಇಲಾಖೆ ಮನವಿ ಮಾಡಿದೆ.

Exit mobile version