Site icon Ullalavani

ಮಹಿಳೆಯರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂಆರ್ಥಿಕವಾಗಿ ಸಬಲಗೊಳಿಸುವ ಕಾರ್ಯವಾಗಬೇಕು: ದೇವಕಿ ಆರ್‌ ಉಳ್ಳಾಲ್‌

ಉಳ್ಳಾಲ: ಉಳ್ಳಾಲ ತಾಲೂಕಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜದ ಪ್ರತಿಯೊಂದು ಮನೆ-ಮನವನ್ನೂ ತಲುಪಿ ಮಹಿಳೆಯರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯದಲ್ಲಿ ಮಹಿಳಾ ಮಂಡಳಿಗಳು ಇನ್ನಷ್ಟು ಸಂಘಟಿತವಾಗಿ ಕೆಲಸ ಮಾಡಬೇಕಾಗಿದೆ ಎಂದು ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ದೇವಕಿ ಆರ್‌ ಉಳ್ಳಾಲ್‌ ಅಭಿಪ್ರಾಯಪಟ್ಟರು.


ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ಉಳ್ಳಾಲ ಸಮುದಾಯ ಭವನದಲ್ಲಿ ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ವಾರ್ಷಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ಉಳ್ಳಾಲ ತಾಲೂಕಿನಲ್ಲಿ ಅನೇಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಪ್ರತಿಯೊಂದು ಮನೆ-ಮನವನ್ನೂ ತಲುಪಬೇಕಾದರೆ ಮಹಿಳೆಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು.ಸ್ವಸಹಾಯ ಸಂಘಗಳನ್ನು ಮುನ್ನಡೆಸುವುದು ಇಂದಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಸದಸ್ಯರನ್ನು ಒಗ್ಗೂಡಿಸುವುದು, ಸಂಘದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದು ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಹಲವು ಅಡಚಣೆಗಳಿದ್ದರೂ, ಒಗ್ಗಟ್ಟು ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ ಎಂದರು.


ಉಳ್ಳಾಲ ನಗರ ಸಮುದಾಯ ಕೇಂದ್ರದ ತಜ್ಞ ವೈದ್ಯೆ ಡಾ. ಶ್ರುತಿ ಮಾತನಾಡಿ, ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳುವುದು, ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದು ಹಾಗೂ ರೋಗಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.ಸೊಳ್ಳೆಗಳ ಮೂಲಕ ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು, ಕಲುಷಿತ ಆಹಾರ ಮತ್ತು ನೀರಿನ ಮೂಲಕ ಟೈಫಾಯ್ಡ್, ಕಾಲರಾ ಹಾಗೂ ಹೆಪಟೈಟಿಸ್‌ ಹರಡುತ್ತವೆ ಎಂದು ಹೇಳಿದರು. ಕುಡಿಯುವ ನೀರು ಮತ್ತು ಆಹಾರದ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಮುನ್ನ ನಡೆದ ಆಹಾರ ಸ್ಪರ್ಧೆಯಲ್ಲಿ ಕ್ಯಾಂಬ್ರಿಡ್ಜ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಪ್ರಾಂಶುಪಾಲೆ ಬಬಿತಾ ಸೂರಜ್‌ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ಜೆಸಿಂತಾ ಮೆಂಡೋನ್ಸಾ, ಕೋಶಾಧಿಕಾರಿ ಶಶಿಕಾಂತಿ ಉಳ್ಳಾಲ್‌, ಸಂಘಟನಾ ಕಾರ್ಯದರ್ಶಿ ತುಳಸೀ, ಉಪಸ್ಥಿತರಿದ್ದರು. ಶಶಿಕಲಾ ಗಟ್ಟಿ ಪ್ರಾರ್ಥಿಸಿದರು.

Exit mobile version