Site icon Ullalavani

ವಿಜಯಲಕ್ಷ್ಮೀ ಪಿ ರೈ ಅವರ “ಭಾವಬಿಂಬ” ಕವನ ಸಂಕಲನ ಲೋಕಾರ್ಪಣೆ

ಕೊಣಾಜೆ; ಸಂಸಾರದ ಸೌಖ್ಯವನ್ನು ಬಯಸುವುದರೊಂದಿಗೆ ಪಾರಂಪರಿಕ ಮೌಲ್ಯ, ಆಧುನಿಕತ ಚಿಂತನೆಗಳನ್ನೊಳಗೊಂಡ ವಿಜಯಲಕ್ಷ್ಮೀ ಪಿ. ರೈ ಅವರ ಕವನ ಸಂಕಲನವು ಸಮಾಜದಲ್ಲಿ ಕೌಟುಂಬಿಕ ಜವಬ್ಧಾರಿ ಮತ್ತು ಈ ಕುರಿತು ಅರಿವನ್ನು ವಿಸ್ತರಿಸುವ ಮಹತ್ವದ ಕೃತಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅವರು ಹೇಳಿದರು.


ಅವರು ವಿಜಯಲಕ್ಷ್ಮೀ ಪ್ರಸಾದ್ ರೈ ಕಳ್ಳಿಮಾರ್ ಅವರು ರಚಿಸಿದ “ಭಾವಬಿಂಬ” ಕವನ ಸಂಕಲನವನ್ನು ಶುಕ್ರವಾರ ಅಡ್ಯಾರ್ ಗಾರ್ಡನ್ ನಲ್ಲಿ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಂಸಾರದಲ್ಲಿ ಹೆಣ್ಣೇ ಕೇಂದ್ರ ಬಿಂದು. ಕುಟುಂಬವನ್ನು ಮುನ್ನಡೆಸುವ ಯಜಮಾನಿಯಾಗಿ ಜೊತೆಗೆ ಸಂಸಾರದ ವಿವಿದ ಪಾತ್ರಗಳೊಂದಿಗೆ ಕುಟುಂಬವನ್ನು ಸಮಭಾವದಲ್ಲಿ ಸರಿದೂಗಿಸಿ ಮುನ್ನಡೆಸುವಲ್ಲಿ ಆಕೆಯದ್ದು ಪ್ರಥಮ ಮತ್ತು ಪ್ರದಾನ ಪಾತ್ರ. ಕುಟುಂಬ ಸುಖದ ಸಂಪತ್ತಿಗೆ ಯ ಜೊತೆಗೆ ಅಲ್ಲಿ ನೋವು, ದುಃಖ, ಅವಮಾನಗಳೂ ಸಹಜ ಎಂಬಂತೆ ಆಗುತ್ತಿರುತ್ತದೆ. ಆದರೆ ಕುಟುಂಬ ಆಕ್ರೋಶಗೊಂಡು ಕುಟುಂಬದ ವಿಘಟನೆಗೆ ದಾರಿ ಮಾಡಕೊಡಬಾರದೆಂಬ ಎಚ್ಚರಿಕೆಯ ಸಂದೇಶಗಳು ಈ ಕವನ ಸಂಕಲನದಲ್ಲಿದೆ. ಒಟ್ಟಿನಲ್ಲಿ ವ್ಯಕ್ತಿ, ವ್ಯಕ್ತಿಯಿಂದ ಕುಟುಂಬ , ಕುಟುಂಬದಿಂದ ಸಮಾಜದ ಏಳಿಗೆಯಾಗಬೇಕೆಂಬ ಧೋರಣೆಯನ್ನು ಇಲ್ಲಿಯ ಕವನಗಳಲ್ಲಿ ಕಾಣಲು ಸಾಧ್ಯ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮೃದುತ್ವದ ಭಾವವೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸೃಜನಶೀಲ ಬರವಣಿಗೆಗಳು ಈ ಕೃತಿಯಲ್ಲಿವೆ. ಮೌನ ಭಾವದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ.
ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗುತ್ತಿರುವ ಕಾಲಘಟ್ಟದಲ್ಲಿ ಭಾರತೀಯ ಕುಟುಂಬ ವ್ಯವಸ್ಥೆಯ ಮೌಲ್ಯವವನ್ಜು ಸಮಾಜಕ್ಕೆ ಕವನಸಂಕಲನದ ಮೂಲಕ ತೋರಿಸುವ ಕೆಲಸವನ್ನು ವಿಜಯಲಕ್ಷ್ಮಿ ರೈ ಅವರು ಮಾಡಿದ್ದಾರೆ ಎಂದರು.


ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ ಅವರು ಕೃತಿ ಪರಿಚಯವನ್ನು ಮಾಡುತ್ತಾ,ಜೀವಪರವಾದ ಕಾಳಜಿ ವಿಜಯಲಕ್ಷ್ಮೀ ರೈ ವ್ಯಕ್ತಿತ್ವದ ಭಾಗ. ಆ ಕಾಳಜಿಯಿಂದಲೇ ಕವನ ಸಂಕಲನ ಹುಟ್ಟಿಕೊಂಡಿದೆ. ಮನಸ್ಸು ಕಟ್ಟುವ ಕೆಲಸ, ಕುಟುಂಬದ ಒಳಗಿನ ಅನೇಕ ಅನುಭವಗಳನ್ನು ಕಟ್ಟಿಕೊಡುವ ಕಾರ್ಯ ಈ ಕವನ ಸಂಕಲನದಲ್ಲಿ ಮೂಡಿಬಂದಿದೆ. ಕುಟುಂಬದೊಳಗಿ‌ನ ಸನ್ಮಾನ,ಸಾಂತ್ವನ, ಮುಖವಾಡ, ಸಂತಸ ಮೊದಲಾದ ಭಾವಸಂಬಂಧಿ ನೆಲೆಯಲ್ಲಿ ಅವರು ಕವಿತೆಗಳನ್ನು ಕಟ್ಟಿಕೊಟ್ಟಿರುವುದನ್ನು ಗಮನಿಸಬಹುದು ಎಂದರು.


ಪೂನಾ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜೂರು ಗುತ್ತು, ತುಳುವ ಸಮಾಜದ ಅಂತರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಲೇಖಕಿ ವಿಜಯಲಕ್ಷ್ಮಿ ಪಿ.ರೈ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಸಾದ್ ರೈ ಕಳ್ಳಿಮಾರ್, ಸೌಧಾಮಿನಿ ಎಸ್ ರೈ, ಸಂಗೀತ್ ರೈ, ರೀಯಾ ಎಸ್ ರೈ ಮೊದಲಾದವರು ಉಪಸ್ಥಿತರಿದ್ದರು.
ಪ್ರಕಾಶಕರಾದ ಕಲ್ಲೂರು ನಾಗೇಶ್ ಅವರು ಸ್ವಾಗತಿಸಿದರು. ಸುಜಯ ಆನಂದ ರೈ ವಂದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


ಅರೆಹೊಳೆ ಪ್ರತಿಷ್ಠಾನದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Exit mobile version