Site icon Ullalavani

ವಿಟ್ಲ: ಅಕ್ರಮ ಕೆಂಪುಕಲ್ಲು, ಮಣ್ಣು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ; ವಾಹನ, ಯಂತ್ರೋಪಕರಣ ವಶಕ್ಕೆ

ವಿಟ್ಲ, ಜು. 04 : ಅಕ್ರಮ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿ ವಾಹನ ಹಾಗೂ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಘಟನೆ ಜುಲೈ 2ರಂದು ಬಂಟ್ವಾಳ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿ ನಡೆದಿದೆ.

ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣರವರಿಗೆ ಜುಲೈ 2 ರ ಸಂಜೆ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಬಂದ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿಗೆ ತೆರಳುತ್ತಾರೆ. ಈ ವೇಳೆ ಪೊಲೀಸ್ ವಾಹನವನ್ನು ನೋಡಿ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ.ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಕೃತ್ಯಕ್ಕೆ ಬಳಸಿದ ಯಂತ್ರೋಪಕರಣಗಳು ಸ್ಥಳದಲ್ಲಿರುತ್ತದೆ. ಈ ಸ್ಥಳದ ಸಮೀಪದಲ್ಲೇ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವುದು ಹಾಗೂ ಮಣ್ಣು ಗಣಿಗಾರಿಕೆಯ ಮಣ್ಣನ್ನು ತುಂಬಿಸಿಕೊಂಡು ಹೋಗುವ ಲಾರಿಗಳ ತೂಕ ಮಾಡಲು ವೇ ಬ್ರಿಡ್ಜ್ ಮತ್ತು ಕಟ್ಟಡ ಮಾಡಿರುವುದು ಹಾಗೂ ಯಂತ್ರೋಪಕರಣಗಳು ಪತ್ತೆಯಾಗಿರುತ್ತದೆ. ಈ ಸೋತ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.ಯಾವುದೇ ಪರವಾನಗಿ ಇಲ್ಲದೇ ಗಣಿಗಾರಿಕೆ ಮಾಡುತ್ತಿದ್ದ ಆರೋಪಿ ಮುಳಿಗದ್ದೆ ಝಕಾರಿಯಾ ಮತ್ತು ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 148/2026, ಕಲಂ:303(2) BNS 2023, ಕಲಂ: 4(1), 21 MMDR (MINES AND MINERALS REGULATION OF DEVELOPMENT) ACT 1957, ಕಲಂ: 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Exit mobile version