ಮಂಗಳೂರು, ಜು. 03 : ಮನೆಯೊಂದರಲ್ಲಿ ಕಳ್ಲತನಕ್ಕೆ ಯತ್ನಿಸಿದ ಆರೋಪಿಗಳ ಪೈಕಿ ಓರ್ವನನ್ನು ನಿವಾಸಿಗಳೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ನಸುಕಿನ ಜಾವ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೂಲಗಳ ಪ್ರಕಾರ, ಶುಕ್ರವಾರ ಬೆಳಗ್ಗೆ ಸುಮಾರು 2:30ರ ಸುಮಾರಿಗೆ ಬದ್ರಿಯಾ ನಗರದ ಹಂಸ ಎಂಬವರ ಮನೆಗೆ ನಾಲ್ವರು ಅಪರಿಚಿತರು ನುಗ್ಗಿದ್ದಾರೆ. ಮನೆಯೊಳಗೆ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ಕುಟುಂಬದವರು ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು, ಕಳ್ಳತನಕ್ಕೆ ಯತ್ನಿಸುತ್ತಿದ್ದ ನಾಲ್ವರ ಪೈಕಿ ಒಬ್ಬನನ್ನು ಹಿಡಿದಿದ್ದಾರೆ. ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿಯನ್ನು ಬಿಹಾರ ಮೂಲದ ದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಈತನನ್ನು ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಪರಾರಿಯಾದ ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.