ಮಂಗಳೂರು ನಗರದ ಸುರತ್ಕಲ್ ಸಮೀಪದ ಬಾಳ ಗ್ರಾಮದ ಒಟ್ಟೆಕಾಯರ್ ಪ್ರದೇಶದಲ್ಲಿ ಗೋಡೌನ್ ನಿರ್ಮಾಣಕ್ಕಾಗಿ ಗುಡ್ಡವನ್ನು ಅಗೆದ ಪರಿಣಾಮ ಭೂ ಕುಸಿತ ಸಂಭವಿಸಿರುವುದು ಅತ್ಯಂತ ಗಂಭೀರ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ಮತ್ತಷ್ಟು ಗುಡ್ಡ ಕುಸಿತ ಸಂಭವಿಸುವ ಅಪಾಯವಿದ್ದು, ಸಂಬಂಧಪಟ್ಟ ಇಲಾಖೆಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಒಟ್ಟೆಕಾಯರ್ ಪ್ರದೇಶದ ಮೂಲಕ ISPRL ಪಾದೂರು ಕಚ್ಚಾ ತೈಲ (Crude Oil) ಪೈಪ್‌ಲೈನ್ ಹಾದು ಹೋಗುತ್ತಿರುವುದರಿಂದ ಯಾವುದೇ ಭೂಕುಸಿತ ಅಥವಾ ನೆಲಜಾರುವಿಕೆ ಸಂಭವಿಸಿದರೆ ಅದರ ಪರಿಣಾಮ ಸಾಮಾನ್ಯ ಆಸ್ತಿ ಹಾನಿಗೆ ಮಾತ್ರ ಸೀಮಿತವಾಗದೆ, ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಈ ಪ್ರದೇಶದಲ್ಲಿ ಸುಮಾರು 80 ಮನೆಗಳಿದ್ದು, ಇದು ಒಂದು ದ್ವೀಪದಂತಿರುವ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಥವಾ ದಾರಿ ಭೂಕುಸಿತದಿಂದ ಹಾನಿಗೊಳಗಾದರೆ ನಿವಾಸಿಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯವಿದೆ. ತುರ್ತು ವೈದ್ಯಕೀಯ ಸೇವೆ, ಶಾಲಾ-ಕಾಲೇಜು, ಉದ್ಯೋಗ ಹಾಗೂ ದೈನಂದಿನ ಅಗತ್ಯ ಸೇವೆಗಳಿಗೂ ತೀವ್ರ ತೊಂದರೆ ಉಂಟಾಗಬಹುದು. ಜೀವಹಾನಿಯ ಸಾಧ್ಯತೆಯನ್ನೂ ನಿರಾಕರಿಸಲಾಗದು.
ಮಂಜನಾಡಿ, ನಾಗೋರಿ ಸೇರಿದಂತೆ ರಾಜ್ಯದ ವಿವಿಧ ಭೂಕುಸಿತ ದುರಂತಗಳಿಂದ ಪಾಠ ಕಲಿಯಬೇಕಾದ ಸಮಯ ಇದಾಗಿದೆ. ದುರಂತ ಸಂಭವಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವುದು ಅಥವಾ ಛಾಯಾಚಿತ್ರ ತೆಗೆಯುವುದು ಆಡಳಿತದ ಕರ್ತವ್ಯವಲ್ಲ. ಜೀವಹಾನಿಯಾಗುವ ಮುನ್ನ ಅಪಾಯವನ್ನು ಗುರುತಿಸಿ ತಡೆಗಟ್ಟುವುದು ಸಂವಿಧಾನಬದ್ಧ ಹಾಗೂ ಕಾನೂನುಬದ್ಧ ಜವಾಬ್ದಾರಿಯಾಗಿದೆ.
ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭೂವಿಜ್ಞಾನ ತಜ್ಞರು, ಮಹಾನಗರ ಪಾಲಿಕೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜಂಟಿಯಾಗಿ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ವೈಜ್ಞಾನಿಕ ಸ್ಥಿರತಾ ಅಧ್ಯಯನ (Slope Stability Assessment) ಕೈಗೊಂಡು, ಅಪಾಯದಲ್ಲಿರುವ ನಿವಾಸಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಜರುಗಿಸಬೇಕು. ಅಗತ್ಯವಿದ್ದಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಾರ್ವಜನಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಕ್ರಮಕ್ಕೆ ಆದ್ಯತೆ ನೀಡಬೇಕು.
ಈ ಪ್ರದೇಶದಲ್ಲಿ ಗುಡ್ಡ ಕುಸಿತದ ಆತಂಕ ಜಿಲ್ಲಾಡಳಿತ ಹಾಗೂ ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು