Site icon Ullalavani

ಕೊಣಾಜೆ: ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸನ್ಮಾನ; ಯುವ ಮಿತ್ರ ಬಳಗದಿಂದ ವೃತ್ತಿ ಮಾರ್ಗದರ್ಶನ

ಕೊಣಾಜೆ, : ಯುವ ಮಿತ್ರ ಬಳಗ (ರಿ.) ಕೊಣಾಜೆ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಇತ್ತೀಚೆಗೆ ಕೊಣಾಜೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನಿಟ್ಟೆ ಯೂನಿವರ್ಸಿಟಿಯ ಉಪನ್ಯಾಸಕರು ಹಾಗೂ ಯುವ ಮಿತ್ರ ಬಳಗದ ಕೋಶಾಧಿಕಾರಿಯಾದ ಶ್ರೀ ರಿಯಾಜ್ ಅಬ್ದುಲ್ ಅವರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು, ವೃತ್ತಿ ಆಯ್ಕೆ, ವ್ಯಕ್ತಿತ್ವ ವಿಕಸನ ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸುವ ಮಾರ್ಗಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ಮಿತ್ರ ಬಳಗದ ಅಧ್ಯಕ್ಷ ಮಹಮ್ಮದ್ ನಝೀರ್ ಅವರು ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳು, ಮಾದಕ ವಸ್ತುಗಳ ವ್ಯಸನ ಹಾಗೂ ಸಮಾಜದ ದುಷ್ಪರಿಣಾಮಗಳಿಂದ ದೂರವಿದ್ದು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಖಾದರ್ ಕೋಡಿಜಾಲ್ ಅವರು ಯುವ ಮಿತ್ರ ಬಳಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ರಾಜು ಅವರು ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ವಿವರಿಸಿ, ಎಸ್‌ಡಿಎಂಸಿ ಹಾಗೂ ಯುವ ಮಿತ್ರ ಬಳಗದ ಸಹಕಾರವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ನೆರವು ಒದಗಿಸುವಂತೆ ಮನವಿ ಮಾಡಿದರು.

ಶಾಲಾ ಅಧ್ಯಾಪಕ ಜಾನ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಯುವ ಮಿತ್ರ ಬಳಗದ ಕಾರ್ಯದರ್ಶಿ ಶಾಹುಲ್ ಹಮೀದ್, ಉಪಾಧ್ಯಕ್ಷರಾದ ಇಬ್ರಾಹಿಂ ಮೂಸಾ ಹಾಗೂ ಅಬ್ದುಲ್ ಅಜೀಜ್, ಪದಾಧಿಕಾರಿಗಳಾದ ಅಶ್ರಫ್ ಕೊಣಾಜೆ, ಸಿದ್ದಿಕ್ ಕೊಣಾಜೆ, ಷರೀಫ್ ಕೊಣಾಜೆ,ಸಿದ್ದೀಕ್ ಏರ್ಮಾಡಿ, ರಫೀಕ್ ಕೊಣಾಜೆ, ಉಮರ್ ಗುಂಡ್ಯ, ಸಮೀರ್ ಕೊಣಾಜೆ, ಫಹೀಮ್ ಕೊಣಾಜೆ, ಷರೀಫ್ ಕಂಗ್ ಹಿತ್ಲು, ನಿಯಾಜ್ ಕೊಣಾಜೆ, ಅಬ್ದುಲ್ ರೆಹಮಾನ್ ಕಂಗ್ ಹಿತ್ಲು, ಸಮದ್, ಗೌರವ ಸಲಹೆಗಾರ ಹಸೈನಾರ್ ಕೊಣಾಜೆ, ಎಸ್‌ಡಿಎಂಸಿ ಸದಸ್ಯ ದಯಾನಂದ ಗಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಎಂಆರ್‌ವೈಸಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಶಾಲಾ ಮುಖ್ಯೋಪಾಧ್ಯಾಯಿನಿಗಾಯತ್ರಿ, ಶಿಕ್ಷಕರು, ಗಣ್ಯರು, ಯುವ ಮಿತ್ರ ಬಳಗದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಯುವ ಮಿತ್ರ ಬಳಗದ ವತಿಯಿಂದ ಪಾನೀಯ ಹಾಗೂ ತಿಂಡಿ ವಿತರಿಸಲಾಯಿತು.

Exit mobile version