ಮಂಗಳೂರು, ಜೂನ್ 30: ತುಳುವ ಭಾಷೆ, ಸಂಸ್ಕೃತಿ ಹಾಗೂ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಂಘಟನೆಯ ತಾಲೂಕು ಮಟ್ಟದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕಾಪು, ಬ್ರಹ್ಮಾವರ ಹಾಗೂ ಉಳ್ಳಾಲ ತಾಲೂಕುಗಳ ಸಂಚಾಲಕರನ್ನು ಮರುನೇಮಕ ಮಾಡಲಾಗಿದೆ.
ಕಾಪು ತಾಲೂಕು ಸಂಚಾಲಕರಾಗಿ ಡಾ. ನಿರಂಜನ್ ಶೆಟ್ಟಿ, ಬ್ರಹ್ಮಾವರ ತಾಲೂಕು ಸಂಚಾಲಕಿಯಾಗಿ ಆಶಾ ಎ. ಹೆಗ್ಡೆ ಹಾಗೂ ಉಳ್ಳಾಲ ತಾಲೂಕು ಸಂಚಾಲಕರಾಗಿ ಪವನ್ ರಾಜ್ ಕೊಲ್ಯ ಅವರನ್ನು ಮರುನೇಮಕಗೊಳಿಸಲಾಗಿದೆ.
ಕಳೆದ ಅವಧಿಯಲ್ಲಿ ಸಂಘಟನೆಯ ಸದಸ್ಯತ್ವ ಅಭಿಯಾನ, ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಸೇರಿದಂತೆ ವಿವಿಧ ಸಂಘಟನಾ ಚಟುವಟಿಕೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಮರುನೇಮಕ ಮಾಡಲಾಗಿದೆ ಎಂದು ಸಂಘಟನೆಯು ತಿಳಿಸಿದೆ.
2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಉದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು, ತುಳುವ ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು ಹಾಗೂ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸುವಂತೆ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ನೂತನವಾಗಿ ಮರುನೇಮಕಗೊಂಡ ಸಂಚಾಲಕರಿಗೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮರುನೇಮಕಗೊಂಡ ಮೂವರು ಸಂಚಾಲಕರಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಅವಧಿಯ ಕಾರ್ಯಚಟುವಟಿಕೆಗಳು ಯಶಸ್ವಿಯಾಗಲಿ ಎಂದು ಶುಭಾಶಯ ಕೋರಿದ್ದಾರೆ.