ಉಳ್ಳಾಲ: ಭಾರತೀಯ ತೀಯಾ ಸಮಾಜ ಉಳ್ಳಾಲ ವಲಯದ ವತಿಯಿಂದ, ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರಕ್ಕೆ ಒಳಪಟ್ಟ ನಾಲ್ಕು ಊರಿಯಗಳಾದ ಉಳ್ಳಾಲ,ಕೋಟೆಕಾರ್-ಉಚ್ಚಿಲ-ತಲಪಾಡಿ,ಬೆಲ್ಮ-ಮಂಜನಾಡಿ ಹಾಗೂ ನಂದ್ಯಾ-ಮಣೇಲಿ ವ್ಯಾಪ್ತಿಯ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ತೀಯಾ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜುಲೈ 5ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಕೊಲ್ಯದ ಸೌಭಾಗ್ಯ ಸಭಾಭವನದಲ್ಲಿ ನಡೆಯಲಿದೆ ಎಂದು ಉಳ್ಳಾಲ ವಲಯ ಭಾರತೀಯ ತೀಯ ಸಮಾಜದ ಪ್ರಧಾನ ಕಾರ್ಯದರ್ಶಿ ಸುಕೇಶ್ ಮಂಜನಾಡಿ ತಿಳಿಸಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಶನಿವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು.ಕಾರ್ಯಕ್ರಮವು ತೀಯ ಪ್ರತಿಭೆಗಳ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭಗೊಳ್ಳಲಿದ್ದು,ಬೆಳಿಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.ಭಾರತೀಯ ತೀಯ ಸಮಾಜ ಉಳ್ಳಾಲ ವಲಯದ ಅಧ್ಯಕ್ಷರಾದ ಜಯಂತ ಕೊಂಡಾಣ ಅಧ್ಯಕ್ಷತೆ ವಹಿಸಲಿದ್ದು, ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಳ್ಳಾಲ ಭಾರತ್ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಕಸ್ತೂರಿ ಸುವರ್ಣ ಅವರು “ಶಿಕ್ಷಣ,ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ತೀಯಾ ಸಮಾಜದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಕೃಷ್ಣ ಬಿ.ಎಂ.ಅವರಿಗೆ “ತೀಯ ಜವಾನ್” ಬಿರುದು ನೀಡಿ ಗೌರವಿಸಲಾಗುವುದು.ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ಸನ್ಮಾನವೂ ನಡೆಯಲಿದೆ.
ಕಳೆದ ವರ್ಷ ಸುಮಾರು 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಈ ಬಾರಿ ಕನಿಷ್ಠ 30ರಿಂದ 35 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ-ಪ್ರತಿಭಾ ಪುರಸ್ಕಾರದ ಪ್ರಯೋಜನ ಪಡೆಯುವ ನಿರೀಕ್ಷೆಯಿದ್ದು, ಕಳೆದ ಎರಡು ತಿಂಗಳುಗಳಿಂದ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆಯೆಂದರು.ಮುಂದಿನ ದಿನಗಳಲ್ಲಿ ಅಶಕ್ತರಿಗೆ ಸಹಾಯಧನ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯೂ ಇದೆಯೆಂದರು.
ಪ್ರಶಸ್ತಿ ಪಡೆಯುವ ವಿದ್ಯಾರ್ಥಿಗಳು ಜುಲೈ 5ರಂದು ಬೆಳಿಗ್ಗೆ 9 ಗಂಟೆಗೆ ಪೋಷಕರೊಂದಿಗೆ ಕಡ್ಡಾಯವಾಗಿ ಹಾಜರಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.ಅರ್ಜಿ ಸಲ್ಲಿಕೆಯ ಅವಧಿಯನ್ನು ಸಾರ್ವಜನಿಕರ ಮನವಿಯ ಮೇರೆಗೆ ಜುಲೈ 2ರ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜೈ ಭಾರತ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್, ಸನ್ ಸಿಟಿ ಬಿಲ್ಡಿಂಗ್, ತೊಕ್ಕೊಟ್ಟು ಇಲ್ಲಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಧಾನ ಕಾರ್ಯದರ್ಶಿ ಸುಕೇಶ್ ಮಂಜನಾಡಿ (ಮೊ.9731747753) ಅವರನ್ನು ಸಂಪರ್ಕಿಸಬಹುದು ಎಂದರು.
ಭಾರತೀಯ ತೀಯ ಸಮಾಜ ಉಳ್ಳಾಲ ವಲಯದ ಅಧ್ಯಕ್ಷರಾದ ಜಯಂತ್ ಕೊಂಡಾಣ, ಮಹಿಳಾ ಸಮಿತಿಯ ಅಧ್ಯಕ್ಷೆ ಸುಧಾಶ್ರೀ ರಮೇಶ್,ಪ್ರಮುಖರಾದ ಗಣೇಶ್ ಕೊಲ್ಯ,ಪವನ್ ರಾಜ್ ಕೊಲ್ಯ,ಜಯಂತ್ ಕೊಲ್ಯ, ನಿಶಾ ಸುನೀಲ್ ತೊಕ್ಕೊಟ್ಟು ಹಾಗೂ ತನುಜಾ ತಲಪಾಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
