ವಿದೇಶದಲ್ಲಿ ವಿವಿಧ ಕಾರಣಗಳಿಂದ ಕಾನೂನು ಕುಣಿಕೆಯೊಳಗೆ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಯುವಕರನ್ನು ಬಿಡುಗಡೆ ಭಾಗ್ಯ ಒದಗಿಸುವಂಥ ಕಾರ್ಯದಲ್ಲಿ ತೊಡಗಿಸಿಕೊಂಡು ಹಲವರ ಬಾಳಿಗೆ ಬೆಳಕಾಗಿ ಮದುವೆಯ ಸಂಭ್ರಮದಲ್ಲಿದ್ದ ಉಳ್ಳಾಲದ ಯುವಕನಿಗೆ ನಾಗರಿಕರು ಅಭಿನಂದನೆ ಸಲ್ಲಿಸಿದರು.
ಕಳೆದ ಒಂಭತ್ತು ವರ್ಷಗಳಿಂದ ಯುಎಇ ಅಲೈನ್ ನಲ್ಲಿ ಅಬುಧಾಬಿ ಸರ್ಕಾರದ ಪೊಲೀಸ್ ಇಲಾಖಾ ಕಚೇರಿ ಕೆಲಸದಲ್ಲಿರುವ ಉಳ್ಳಾಲದ ಮುಹಮ್ಮದ್ ತೌಸೀಫ್ ದುಬೈಗೆ ಉದ್ಯೋಗಕ್ಕಾಗಿ ತೆರಳಿ ವಿವಿಧ ಕಾರಣಗಳಿಂದ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದ ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಅಸಹಾಯಕರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವಕರಿಗೆ ಕಾನೂನು ನೆರವು ನೀಡುತ್ತಾ ಬಂದಿದ್ದಾರೆ. ಈಗಾಗಲೇ ಒಂಭತ್ತು ಯುವಕರನ್ನು ಕಾನೂನಿನ ಕುಣಿಕೆಯಿಂದ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರ ಮದುವೆಯ ಔತಣಕೂಟ ನಿನ್ನೆ ಉಳ್ಳಾಲದಲ್ಲಿ ನಡೆದಿದೆ. ಈತ ದುಬೈಯಲ್ಲಿ ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಮಂಗಳೂರು ಬ್ಯಾರಿ ಗಲ್ಫ್ ಗಯ್ಸ್ ಮತ್ತು ಕರ್ನಾಟಕ ಪ್ರವಾಸಿ ಅಸೋಸಿಯೇಷನ್ ಉಳ್ಳಾಲ ಮೇಲಂಗಡಿ ಜುಮಾ ಮಸೀದಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಔತಣಕೂಟದ ಸಭಾಂಗಣದಲ್ಲೇ ಮಂಗಳೂರು ಬ್ಯಾರಿ ಗಲ್ಫ್ ಗಯ್ಸ್, ಕರ್ನಾಟಕ ಪ್ರವಾಸಿ ಅಸೋಸಿಯೇಷನ್ ಹಾಗೂ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಪರವಾಗಿ ಆಡಳಿತ ಸಮಿತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು.
ಮೇಲಂಗಡಿ ಮುಹಿಯುದ್ದೀನ್ ಜಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಮಾತನಾಡಿ, ದುಬೈ ಜೈಲು ಪಾಲಾಗಿದ್ದ ಯುವಕರನ್ನು ಬಿಡುಗಡೆಗೊಳಿಸಿರುವ ತೌಸೀಫ್ ನಮ್ಮೂರಿನ ಯುವಕ ಎನ್ನುವ ಹೆಮ್ಮೆಯಿದೆ. ಈ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದರೂ ಆತನನ್ನು ಬಲ್ಲವರು ದುಬೈಯಿಂದ ಕರೆ ಮಾಡಿ ತಿಳಿಸಿದ್ದರಿಂದ ಮಸೀದಿ ಹಾಗೂ ಇನ್ನೆರಡು ಸಂಘಟನೆಯ ಪರವಾಗಿ ಮದುವೆ ಸಂದರ್ಭದಲ್ಲೇ ಗೌರವಾಭಿನಂದನೆ ಸಲ್ಲಿಸಲಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ತೌಸೀಫ್ ಮಾತನಾಡಿ,
ತಾನು ಅಬುಧಾಬಿ ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ದುಬೈಗೆ ಬಂದು ತಾವು ಮಾಡದ ತಪ್ಪಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಜೈಲಲ್ಲಿರುವವರ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ ಕಾನೂನು ಪ್ರಕ್ರಿಯೆಗೆ ನೆರವು ನೀಡಿ ಈಗಾಗಲೇ ಒಂಭತ್ತು ಮಂದಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಹಾಯ ಮಾಡಿದ್ದೇನೆ. ಈ ಕಾರ್ಯದಲ್ಲಿ ತನ್ನೊಂದಿಗೆ ಇನ್ನೋರ್ವ ಕೈಜೋಡಿಸಿದ್ದಾರೆಂದು ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಅದ್ದಾಮ, ಕಾರ್ಯದರ್ಶಿ ರಹ್ಮಾನ್, ಜತೆಕಾರ್ಯದರ್ಶಿ ಮುಹಿಯುದ್ದೀನ್ ಉಳ್ಳಾಲ್, ಸಮಿತಿ ಸದಸ್ಯರಾದ ಚೈಮೋನು ಮೊದಲಾದವರು ಉಪಸ್ಥಿತರಿದ್ದರು.
ರಹೀಂ ಮುಟ್ಟಿಕಲ್ ಕಾರ್ಯಕ್ರಮ ನಿರೂಪಿಸಿದರು.