Site icon Ullalavani

ಗ್ಯಾಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಅಗತ್ಯ – ಅಡುಗೆ ಅನಿಲವನ್ನು ಮೂಲಭೂತ ಹಕ್ಕಾಗಿ ಘೋಷಿಸಲಿ

ಅಡುಗೆ ಅನಿಲವು ಇಂದು ಪ್ರತಿಯೊಂದು ಕುಟುಂಬದ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಕೆಲವು ಗ್ಯಾಸ್ ಏಜೆನ್ಸಿಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು ಮತ್ತು ಕೃತಕ ಕೊರತೆಯ ಸೃಷ್ಟಿಯಿಂದ ಸಾಮಾನ್ಯ ಗ್ರಾಹಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಗ್ರಾಹಕರು ಬುಕ್ಕಿಂಗ್ ಮಾಡಿದ ತಕ್ಷಣ OTP ಕೇಳಿಸಿಕೊಂಡರೂ, ಗ್ಯಾಸ್ ಸಿಲಿಂಡರ್ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ದಿನಗಳ ನಂತರ ತಲುಪುತ್ತಿದೆ ಎಂಬ ದೂರುಗಳು ಹೆಚ್ಚಾಗಿವೆ. ಅನೇಕ ಕಡೆಗಳಲ್ಲಿ ಗ್ಯಾಸ್ ಏಜೆನ್ಸಿಯ ಡೆಲಿವರಿ ಸಿಬ್ಬಂದಿ ಹಾಗೂ ಲಾರಿ ಚಾಲಕರು ಸೇರಿ ಕೃತಕ ಅಭಾವ ಸೃಷ್ಟಿಸಿ, ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ.

ಒಂದು ಕುಟುಂಬಕ್ಕೆ 30 ದಿನಕ್ಕೆ ಕೇವಲ ಒಂದು ಸಿಲಿಂಡರ್ ಮಾತ್ರ ಸಾಕಾಗುವುದಿಲ್ಲ. ವಿಶೇಷವಾಗಿ ಹೆಚ್ಚು ಸದಸ್ಯರಿರುವ ಕುಟುಂಬಗಳು, ಬಾಡಿಗೆ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಕಟ್ಟಿಗೆ ಒಲೆ ಬಳಸುವ ಅವಕಾಶವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಅನಿಲದ ಲಭ್ಯತೆ ಅತ್ಯಗತ್ಯ ಸೇವೆಯಾಗಿದೆ.

ನೀರು, ಗಾಳಿ, ಆರೋಗ್ಯ, ವಿದ್ಯುತ್ ಸೇವೆಗಳಂತೆ ಅಡುಗೆ ಅನಿಲವನ್ನೂ ಜನರ ಮೂಲಭೂತ ಅಗತ್ಯ ಸೇವೆಯಾಗಿ ಪರಿಗಣಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ದೇಶದ ಸಂಸದರು ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ, ಪ್ರತಿಯೊಬ್ಬ ನಾಗರಿಕನಿಗೂ ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ದೊರೆಯುವಂತೆ ಕಾನೂನು ಮತ್ತು ನೀತಿ ರೂಪಿಸಲು ಒತ್ತಾಯಿಸಬೇಕು.

ಅಡುಗೆ ಅನಿಲ ವಿತರಣೆಯಲ್ಲಿ ಪಾರದರ್ಶಕತೆ, ಗ್ರಾಹಕರ ಹಕ್ಕುಗಳ ರಕ್ಷಣೆ ಹಾಗೂ ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮಾತ್ರ ಸಾರ್ವಜನಿಕರ ವಿಶ್ವಾಸವನ್ನು ಉಳಿಸಬಹುದು.

Exit mobile version