Site icon Ullalavani

ಹೊರ ರಾಜ್ಯಗಳಿಗೆ ಕೆಂಪು ಬಾಕ್ಸೈಟ್ ಸಾಗಾಟ; ವಿನಾಶದ ಅಂಚಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ? ಅಧಿಕಾರಿಗಳ ಮೌನದ ವಿರುದ್ಧ ಸಾರ್ವಜನಿಕರ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಬಾಕ್ಸೈಟ್ ಸೇರಿದಂತೆ ಖನಿಜ ಸಂಪತ್ತಿನ ಅತಿಯಾದ ಶೋಷಣೆ ಹಾಗೂ ಹೊರ ರಾಜ್ಯಗಳಿಗೆ ಭಾರಿ ಪ್ರಮಾಣದಲ್ಲಿ ಸಾಗಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶಗಳಾಗಿರುವ ಬೆಟ್ಟಗುಡ್ಡಗಳು, ಕೃಷಿಭೂಮಿಗಳು, ಜಲಮೂಲಗಳು ಮತ್ತು ಜೀವ ವೈವಿಧ್ಯತೆ ನಾಶದ ಅಂಚಿನಲ್ಲಿದ್ದು, ಜಿಲ್ಲೆಯ ಭೌಗೋಳಿಕ ಸಮತೋಲನಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ಪರಿಸರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಭೂಮಿ ಹೊಂದಿರುವುದೇ ಖನಿಜ ಸಂಪತ್ತನ್ನು ಹೊರತೆಗೆಯುವ ಹಕ್ಕು ನೀಡುವುದಿಲ್ಲ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪರಿಸರ ಇಲಾಖೆ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಪೂರ್ವಾನುಮತಿ ಕಡ್ಡಾಯವಾಗಿದೆ. ಖನಿಜ ಮತ್ತು ಗಣಿಗಳ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ, ಹಾಗೂ ಇತರೆ ಕಾನೂನುಗಳು ಇಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ. ಆದರೆ ಜಿಲ್ಲಾಡಳಿತ ಜಿಲ್ಲಾಧಿಕಾರಿ ಗಳು ಮೌನಿಗಳಾಗಿದ್ದಾರೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಂಪು ಬಾಕ್ಸೈಟ್ ಗಣಿಗಾರಿಕೆ ಮತ್ತು ಹೊರ ರಾಜ್ಯಗಳಿಗೆ ಸಾಗಾಟದ ಹಿಂದೆ ರಾಜಕೀಯ ಪ್ರಭಾವಿಗಳು, ಗಣಿ ಮತ್ತು ಭೂವೈಜ್ಞಾನಿಕ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಆಶೀರ್ವಾದ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪರಿಸರ ನಾಶ, ರಸ್ತೆ ಹಾನಿ, ಭೂ ಕುಸಿತ, ಜಲಮೂಲಗಳ ಹಾನಿ ಮತ್ತು ಕೃಷಿ ಪ್ರದೇಶಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ನಡುವೆಯೂ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಅನುಮತಿಯಿಲ್ಲದೆ ಅಥವಾ ನಿಯಮ ಉಲ್ಲಂಘಿಸಿ ನಡೆಸುವ ಗಣಿಗಾರಿಕೆ ಅಕ್ರಮವಾಗಿದ್ದು, ಇಂತಹ ಪ್ರಕರಣಗಳಲ್ಲಿ ಖನಿಜ, ವಾಹನ ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳುವುದು, ದಂಡ ವಿಧಿಸುವುದು ಹಾಗೂ ಅಪರಾಧ ಪ್ರಕರಣ ದಾಖಲಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೂ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಈಗಾಗಲೇ ಪ್ರವಾಹ, ಭೂಕುಸಿತ ಮತ್ತು ಪರಿಸರ ಅಸಮತೋಲನದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬೆಟ್ಟಗಳನ್ನು ಕೊರೆದು, ಕೆಂಪು ಬಾಕ್ಸೈಟ್ ಅನ್ನು ಹೊರ ರಾಜ್ಯಗಳಿಗೆ ಸಾಗಿಸುವ ದಂಧನೆಗೆ ಕಡಿವಾಣ ಹಾಕದಿದ್ದರೆ, ಮುಂದಿನ ಪೀಳಿಗೆಗೆ ಉಳಿಯುವುದು ಬರಿದಾದ ಭೂಮಿ ಮತ್ತು ಪರಿಸರ ದುರಂತ ಮಾತ್ರ ಎಂಬ ಆತಂಕ ವ್ಯಕ್ತವಾಗಿದೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version