Site icon Ullalavani

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಕೈ ಸನ್ನೆ- ಡಿಎಂಕೆ ಸಭಾತ್ಯಾಗ

ಚೆನ್ನೈ, ಜೂ. 23:ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ವಿಜಯ್ ಅವರು ಭಾಷಣದ ವೇಳೆ ಕೈ ಸನ್ನೆ ಮಾಡುತ್ತಿದ್ದಂತೆ ವಿರೋಧ ಪಕ್ಷ ಡಿಎಂಕೆ ಶಾಸಕರು ಸದನದಿಂದ ಹೊರನಡೆದಿದ್ದಾರೆ.


ಭಾಷಣದ ವೇಳೆ ಸಿಎಂ ಜೋಸೆಫ್ ವಿಜಯ್‌ ಮಾಡಿದ ಸನ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಅವರು ಈ ಹಿಂದೆ ಮಾಡಿದ್ದ ಕೈ ಸನ್ನೆಯನ್ನೇ ಇದೀಗ ವಿಜಯ್ ಮರುಸೃಷ್ಟಿಸಿದ್ದಾರೆ ಎನ್ನಲಾಗಿದೆ. ವಿಜಯ್ ಈ ಸನ್ನೆ ಮಾಡುತ್ತಿದ್ದಂತೆ ಆಡಳಿತಾರೂಢ ಟಿವಿಕೆ ಪಕ್ಷದ ಶಾಸಕರು ಮೇಜು ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.ಇದಕ್ಕೂ ಮುನ್ನ ಈ ವರ್ಷದ ಆರಂಭದಲ್ಲಿ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆ ಮುಗಿಸಿ ಹೊರಬರುವಾಗ ಎಂ.ಕೆ. ಸ್ಟಾಲಿನ್ ಅವರು ಮಾಧ್ಯಮಗಳತ್ತ ಕೈ ಎತ್ತಿ ಸನ್ನೆಯೊಂದನ್ನು ಮಾಡಿದ್ದರು. ಈ ಮೂಲಕ ಸೀಟು ಹಂಚಿಕೆ ಮಾತುಕತೆ ಯಶಸ್ವಿಯಾಗಿದೆ ಎಂಬುದನ್ನು ತೋರಿಸಲು ಹೀಗೆ ಮಾಡಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಆದರೆ ಸ್ಟಾಲಿನ್ ನಂತರ ಸ್ಪಷ್ಟನೆ ನೀಡಿ, `ವರದಿಗಾರರು ಪದೇ ಪದೇ ಪ್ರಶ್ನೆ ಕೇಳುತ್ತಿದ್ದರಿಂದ, ಮಾತುಕತೆ ಮುಗಿಯಿತು ಎಂದು ಹೇಳಲು ಸಹಜವಾಗಿ ಕೈ ಸನ್ನೆ ಮಾಡಿದ್ದೆ ಅಷ್ಟೇ” ಎಂದು ಹೇಳಿದ್ದರು. ಇದೀಗ ಅದೇ ಸನ್ನೆಯನ್ನು ಸಿಎಂ ವಿಜಯ್ ವಿಧಾನಸಭೆಯಲ್ಲಿ ಬಳಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 

Exit mobile version